ನವದೆಹಲಿ, ಫೆ.1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸತತ ಒಂಬತ್ತನೇ ಬಜೆಟ್ ಮಂಡಿಸಿದರು.
ಬಜೆಟ್ ಪ್ರಮುಖಾಂಶಗಳು: ತೆರಿಗೆ ರಿಯಾಯಿತಿಗಳು ಅಥವಾ ಪ್ರಮಾಣಿತ ಕಡಿತ ಬದಲಾವಣೆಗಳನ್ನು ನಿರೀಕ್ಷಿಸುತ್ತಿದ್ದ ಆದಾಯ ತೆರಿಗೆ ಪಾವತಿದಾರರಿಗೆ ಪರಿಹಾರ ಸಿಗಲಿಲ್ಲ. ಹೈನುಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ಕ್ಷೇತ್ರಗಳಿಗೆ ಸಮಗ್ರ ಪ್ಯಾಕೇಜ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನಾವರಣಗೊಳಿಸಿದರು, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಒಟ್ಟು ರೂ. 1,62,671 ಕೋಟಿ ಹಂಚಿಕೆ ಮಾಡಲಾಗಿದೆ – ಇದು 2025-26ರ ಪರಿಷ್ಕೃತ ಅಂದಾಜಿನ ರೂ. 1,51,853 ಕೋಟಿಗಿಂತ ಶೇ. 7.12 ರಷ್ಟು ಹೆಚ್ಚಾಗಿದೆ.
ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜಾರಿಗೆ ತರಲು ಸಿದ್ಧವಾಗುತ್ತಿದ್ದಂತೆ, ಕೇಂದ್ರವು ಅದಕ್ಕೆ ರೂ. 95,692.31 ಕೋಟಿ ಹಂಚಿಕೆ ಮಾಡಿದೆ.
ದೇಶಾದ್ಯಂತ 15,000 ಮಾಧ್ಯಮಿಕ ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಕಾಮಿಕ್ಸ್ ಮತ್ತು ಕಂಟೆಂಟ್ ಕ್ರಿಯೇಷನ್ ಪ್ರಯೋಗಾಲಯಗಳನ್ನು ಸ್ಥಾಪಿಸಲು ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಅನ್ನು ಸರ್ಕಾರ ಬೆಂಬಲಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಪರಿಸರ ಸುಸ್ಥಿರ ಪ್ರಯಾಣಿಕ ವ್ಯವಸ್ಥೆಗಳನ್ನು ಉತ್ತೇಜಿಸುವ ಸಲುವಾಗಿ, ನಗರಗಳ ನಡುವೆ ಏಳು ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿ. ಅವುಗಳೆಂದರೆ ಮುಂಬೈ-ಪುಣೆ, ಪುಣೆ-ಹೈದರಾಬಾದ್,
ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಣಾಸಿ, ವಾರಣಾಸಿ-ಸಿಲಿಗುರಿ.
ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್, ಖಗೋಳ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ 4 ದೂರದರ್ಶಕ ಮೂಲಸೌಕರ್ಯ ಸೌಲಭ್ಯಗಳನ್ನು ಸ್ಥಾಪಿಸಿ ಅಭಿವೃದ್ಧಿಪಡಿಸುವುದು, ಐಐಎಂ ಸಹಯೋಗದೊಂದಿಗೆ, ಹೈಬ್ರಿಡ್ ಮೋಡ್‌ನಲ್ಲಿ ಪ್ರಮಾಣೀಕೃತ, ಉತ್ತಮ ಗುಣಮಟ್ಟದ 12 ವಾರಗಳ ತರಬೇತಿ ಕೋರ್ಸ್ ಮೂಲಕ 20 ಪ್ರವಾಸಿ ತಾಣಗಳಲ್ಲಿ 10,000 ಮಾರ್ಗದರ್ಶಕರ ಕೌಶಲ್ಯವನ್ನು ಹೆಚ್ಚಿಸುವ ಪ್ರಾಯೋಗಿಕ ಯೋಜನೆ, ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಸಲುವಾಗಿ ಒಡಿಶಾ, ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಕಡಲಾಮೆಯ ಸಂತತಿ ಹೆಚ್ಚಿಸಲು ಕ್ರಮ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪಕ್ಷಿ ವೀಕ್ಷಣಾ ಸ್ಥಳಗಳ ಅಭಿವೃದ್ಧಿ.
ಮೀನುಗಾರಿಕೆ ಉತ್ತೇಜಿಸಲು 500 ರಿಸರ್ವಾಯರ್ ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿಗೆ ಕ್ರಮ, ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಮೌಲ್ಯ ಸರಪಳಿಯನ್ನು ಬಲಪಡಿಸುವುದು ಮತ್ತು ಮೀನು ಕೃಷಿಕರ ಉತ್ಪಾದಕ ಸಂಸ್ಥೆಗಳೊಂದಿಗೆ ನವೋದ್ಯಮಗಳು ಮತ್ತು ಮಹಿಳಾ ನೇತೃತ್ವದ ಗುಂಪುಗಳನ್ನು ಒಳಗೊಂಡ ಮಾರುಕಟ್ಟೆ ಸಂಪರ್ಕವನ್ನು ಸಕ್ರಿಯಗೊಳಿಸಲು ಅಗತ್ಯ ಕ್ರಮ.




By
ForthFocus™