ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಗಣನೀಯವಾಗಿ ಕುಸಿತವಾಗಿರುವ ಬೆನ್ನಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ಜಾರಿಗೆ ತರಲಾದ ಲಾಕ್ ಡೌನ್ ಪ್ರಕ್ರಿಯೆಯನ್ನು 5 ಹಂತಗಳಲ್ಲಿ ಸಡಿಲಿಕೆ ಮಾಡುವ ಪ್ರಕ್ರಿಯೆಯ ಮೊದಲ ಭಾಗವಾಗಿ ಮುಂಬಯಿಯಲ್ಲಿ ಸೋಮವಾರ ಬೆಳಗ್ಗೆಯಿಂದ ಸ್ಥಳೀಯ ಬಸ್ ಸಂಚಾರ ಆರಂಭಗೊಂಡಿದೆ. ಬಸ್ಸಿನಲ್ಲಿ ಇರುವ ಸೀಟಿನಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಮಹಾ ಸರ್ಕಾರದ ಅಧೀನದಲ್ಲಿರುವ ಬೆಸ್ಟ್ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ.
ಮಾಲ್, ಥಿಯೇಟರ್, ಮಲ್ಟಿಪ್ಲೆಕ್ಸ್ ಹೊರತುಪಡಿಸಿ ಉಳಿದಂತೆ ಹೊಟೇಲು, ಅಂಗಡಿ ಮುಂಗಟ್ಟುಗಳು, ಸಾರ್ವಜನಿಕ ಸ್ಥಳಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ವಾರಾಂತ್ಯದಲ್ಲಿ ಹೊರತುಪಡಿಸಿ ಉಳಿದ ದಿನಗಳಲ್ಲಿ ರೆಸ್ಟೋರೆಂಟ್ ಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಸಂಜೆ 4 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ.
ಪರಿಸ್ಥಿತಿಯನ್ನು ಅವಲೋಕಿಸಿ ನಿಯಮ ಸಡಿಲಿಕೆ ಅಥವಾ ಬಿಗಿಗೊಳಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಅಂದ ಹಾಗೆ ಜೂನ್ 15ರವರೆಗೆ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ.
ಭಾನುವಾರ ಮಹಾರಾಷ್ಟ್ರದಲ್ಲಿ 12,557 ಪಾಸಿಟಿವ್ ಪ್ರಕರಣ ವರದಿಯಾಗಿದ್ದು 14,433 ಮಂದಿ ಗುಣಮುಖರಾಗಿದ್ದಾರೆ. 233 ಮಂದಿ ಮೃತಪಟ್ಟಿದ್ದು 1,85,527 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದ ಚೇತರಿಕೆ ಪ್ರಮಾಣ ಶೇ. 95.05ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ. 1.72 ರಷ್ಟಿದೆ. ಕೆಲವೇ ವಾರಗಳ ಹಿಂದೆ ದೇಶಾದ್ಯಂತ ಸೋಂಕು ನಿಯಂತ್ರಣಕ್ಕೆ ತರಲು ಸಂಪೂರ್ಣ ವಿಫಲವಾಗಿದೆ ಎಂಬ ಹಣೆಪಟ್ಟಿ ಹೊತ್ತಿದ್ದ ಮಹಾರಾಷ್ಟ್ರವು ಅಲ್ಪಾವಧಿಯಲ್ಲಿ ಸೋಂಕನ್ನು ನಿಯಂತ್ರಣಕ್ಕೆ ತಂದಿದೆ.