ಫ್ಲೈಯಿಂಗ್ ಸಿಖ್ ಎಂದು ಮನೆಮಾತಾಗಿರುವ ಹಿರಿಯ ಕ್ರೀಡಾಪಟು ಮಿಲ್ಖಾ ಸಿಂಗ್ ಚಂಡೀಘಡ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಅವರು ಮೂವರು ಪುತ್ರಿಯರಾದ ಡಾ. ಮೋನಾ ಸಿಂಗ್, ಅಲೀಜಾ ಗ್ರೋವರ್, ಸೋನಿಯಾ ಸಾನ್ವಾಲ್ಕಾ ಮತ್ತು ಮಗ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ರನ್ನು ಅಗಲಿದ್ದಾರೆ. ಕೋವಿಡ್ ನಿಂದ ಜೂನ್ 3 ರಂದು ಅವರ ಆಮ್ಲಜನಕದ ಮಟ್ಟ ಕುಸಿದ ಕಾರಣ ಅವರನ್ನು ಐಸಿಯುಗೆ ದಾಖಲಿಸಲಾಯಿತು.
ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ಮಿಲ್ಖಾ ಸಿಂಗ್, ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಕ್ರೀಡೆಗೆ ಪರಿಚಯಿಸಲ್ಪಟ್ಟರು. ಏಷ್ಯನ್ ಕ್ರೀಡಾಕೂಟದಲ್ಲಿ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಏಕೈಕ ಕ್ರೀಡಾಪಟು ಎಂಬ ಖ್ಯಾತಿ ಪಡೆದಿದ್ದರು. 1958 ಮತ್ತು 1962 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದ ಅವರು 1956 ರ ಮೆಲ್ಬೋರ್ನ್‌ನಲ್ಲಿ ನಡೆದ ಒಲಿಂಪಿಕ್ಸ್, ರೋಮ್‌ನಲ್ಲಿ 1960ರ ಒಲಿಂಪಿಕ್ಸ್ ಮತ್ತು 1964 ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಕ್ರೀಡಾ ಸಾಧನೆಗಳಿಗಾಗಿ ಪದ್ಮಶ್ರೀ ಗೌರವಕ್ಕೆ ಮಿಲ್ಖಾ ಪಾತ್ರರಾಗಿದ್ದರು.
1958 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 400 ಮೀ ಸ್ಪರ್ಧೆಯಲ್ಲಿ 46.6 ಸೆಕೆಂಡುಗಳೊಂದಿಗೆ ಓಟ ಮುಗಿಸಿ ಚಿನ್ನದ ಪದಕ ಗೆದ್ದರು. ಈ ಸಾಧನೆಯು ಸ್ವತಂತ್ರ ಭಾರತದಿಂದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಚಿನ್ನದ ಪದಕ ಎಂಬ ದಾಖಲೆ ಸೃಷ್ಟಿಯಾಯಿತು.
ಪ್ರಧಾನಿ ನರೇಂದ್ರ ಮೋದಿ ಮಿಲ್ಖಾ ಸಿಂಗ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ನಾನು ಕೆಲವು ದಿನಗಳ ಹಿಂದೆ ಮಿಲ್ಖಾ ಸಿಂಗ್ ಅವರೊಂದಿಗೆ ಮಾತನಾಡಿದ್ದೆ. ಇದು ನಮ್ಮ ಕೊನೆಯ ಸಂಭಾಷಣೆ ಎಂದು ನನಗೆ ತಿಳಿದಿರಲಿಲ್ಲ. ಹಲವಾರು ಉದಯೋನ್ಮುಖ ಕ್ರೀಡಾಪಟುಗಳು ಮಿಲ್ಖಾ ಸಿಂಗ್ ಅವರ ಜೀವನದಿಂದ ಸ್ಪೂರ್ತಿ ಪಡೆದಿದ್ದಾರೆ. ಪ್ರಖರ ರಾಷ್ಟ್ರೀಯವಾದಿ ಆಗಿದ್ದ ಮಿಲ್ಖಾ ಅವರು ಅಸಂಖ್ಯಾತ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದ ಶ್ರೇಷ್ಠ ಕ್ರೀಡಾಪಟುವಾಗಿದ್ದರು. ಅವರ ಸ್ಪೂರ್ತಿದಾಯಕ ವ್ಯಕ್ತಿತ್ವವು ಲಕ್ಷಾಂತರ ಜನರಿಗೆ ಸದಾ ಪ್ರೇರಣೆ ನೀಡಲಿದೆ” ಎಂದು ಪ್ರಧಾನಿ ತಮ್ಮ ಶೋಕ ಸಂದೇಶದಲ್ಲಿ ಅಗಲಿದ ಕ್ರೀಡಾಪಟುವನ್ನು ಸ್ಮರಿಸಿದ್ದಾರೆ.