‘ಸಿಡಿ ಸದ್ದು’ ಜೋರಾದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಹುತೇಕ ತಟಸ್ಥವಾಗಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಬೆಳಗಾವಿಯಿಂದ ತನ್ನ ಖಾಸಗಿ ವಿಮಾನದಲ್ಲಿ ಮೈಸೂರಿಗೆ ಬಂದು ಸ್ವಲ್ಪ ಸಮಯದ ನಂತರ ಪುನಃ ಬೆಳಗಾವಿಗೆ ಹಿಂದಿರುಗಿ ತನ್ನ ಮುಂಬಯಿ ಭೇಟಿ ಮತ್ತು ಮುಂದಿನ ನಡೆಯ ಕುರಿತು ಅಲ್ಪ ಸ್ವಲ್ಪ ಮಾಹಿತಿ ನೀಡಿದ್ದಾರೆ.
ನನಗೆ ಮತ್ತೆ ಮಂತ್ರಿಯಾಗಲು ಆಸಕ್ತಿಯಿಲ್ಲ. ದೇವೇಂದ್ರ ಫಡ್ನವಿಸ್ ನನ್ನ ಗಾಡ್ ಫಾದರ್, ಅದಕ್ಕಾಗಿಯೇ ನಾನು ಅವರನ್ನು ಭೇಟಿಯಾಗಲು ಮುಂಬಯಿಗೆ ತೆರಳಿದ್ದೆ. ಆರ್.ಎಸ್.ಎಸ್ ಮತ್ತು ಬಿಜೆಪಿ ನನಗೆ ನೀಡಿದ ಗೌರವ ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಿಗಲಿಲ್ಲ. ಕಾಂಗ್ರೆಸ್ ಮುಳುಗುವ ದೋಣಿ, ನಾನು ಮತ್ತೆ ಅದನ್ನು ಸೇರುವ ಬಗ್ಗೆ ಯೋಚಿಸುವುದಿಲ್ಲ.
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ಹಿರಿಯರು ಮತ್ತು ಹಿತೈಷಿಗಳ ಸಲಹೆಗಳ ನಂತರ, ನಾನು ಸ್ವಲ್ಪ ಸಮಯದವರೆಗೆ ಅದನ್ನು ಮುಂದೂಡಿದ್ದೇನೆ. ಈಗ ಆ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ನನಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿದರೂ ನಾನು ಯಾವುದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ. ಒಂದು ವೇಳೆ ನಾನು ರಾಜೀನಾಮೆ ನೀಡಿದರೂ ನಾನು ಬಿಜೆಪಿಯಲ್ಲಿಯೇ ಇರುತ್ತೇನೆ.
ಸ್ವಲ್ಪ ಸಮಯ ನನಗೆ ಬೇಸರವಾದ ಕಾರಣ ನಾನು ರಾಜಕೀಯ ನಿವೃತ್ತಿಯ ಬಗ್ಗೆ ಯೋಚಿಸಿದೆ. ನನ್ನ ಕುಟುಂಬವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಮಕ್ಕಳು ಮತ್ತು ನನ್ನ ಸಹೋದರರು ಬಲಿಷ್ಠವಾಗಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.