ಹುಬ್ಬಳ್ಳಿ, ಏ.19: ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್‌ನಲ್ಲಿ ಕಾರ್ಪೊರೇಟರ್‌ನ ಮಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಆರೋಪಿ ಫಯಾಜ್ ನನ್ನು ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 23 ವರ್ಷ ವಯಸ್ಸಿನ ನೇಹಾ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಅವರ ಪುತ್ರಿ ಖಾಸಗಿ ಕಾಲೇಜಿನಲ್ಲಿ ಮಾಸ್ಟರ್ಸ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಎಂಸಿಎ) ವ್ಯಾಸಂಗ ಮಾಡುತ್ತಿದ್ದಳು. ಕೊಲೆಯ ಘಟನೆ ಕ್ಯಾಂಪಸ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಮೊದಲ ಸೆಮಿಸ್ಟರ್ ಎಂಸಿಎ ಪರೀಕ್ಷೆ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಸಂಜೆ 4:30ಕ್ಕೆ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿ ಫಯಾಜ್ ಕೊಲೆಯಾದ ನೇಹಾ ಅವರನ್ನು ಪದೇ ಪದೇ ಪ್ರೀತಿಸು ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ರಾಜಕೀಯ ಕೆಸರೆರಚಾಟ: ಘಟನೆಯನ್ನು ಮುಂದಿಟ್ಟು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಡುವೆ ಹೇಳಿಕೆಯ ವಾಗ್ವಾದ ನಡೆಯುತ್ತಿದೆ. ರಾಜ್ಯದಲ್ಲಿ ಸುರಕ್ಷತೆಯ ವಾತಾವರಣ ಇಲ್ಲ. ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಮತ್ತು ಹುಬ್ಬಳ್ಳಿಯ ಕೊಲೆ ಪ್ರಕರಣ ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಪಶ್ಚಿಮ ಬಂಗಾಳದ ಹಾಗೆ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂತಹ ಘಟನೆಗಳು ಬಸವರಾಜ ಬೊಮ್ಮಾಯಿ ಅಧಿಕಾರದ ಅವಧಿಯಲ್ಲಿಯೂ ನಡೆದಿವೆ. ವಯಕ್ತಿಕ ಕಾರಣಗಳಿಂದ ಕೊಲೆ ನಡೆದಿರಬಹುದು. ಏನೇ ಇದ್ದರೂ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.