ಬೆಂಗಳೂರು, ಫೆ.9: ಫೆಬ್ರವರಿ 11 ರಿಂದ 14ರ ವರೆಗೆ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 19 ದೇಶಗಳು ಭಾಗವಹಿಸಲಿವೆ. ಫ್ರಾನ್ಸ್, ನೆದರ್‌ಲ್ಯಾಂಡ್, ಜಪಾನ್, ಥಾಯ್ಲೆಂಡ್, ಮಲೇಷ್ಯಾ, ದಕ್ಷಿಣ ಕೊರಿಯಾ, ಇಸ್ರೇಲ್, ನಾರ್ವೆ, ಸ್ವಿಟ್ಜರ್‌ಲ್ಯಾಂಡ್, ತೈವಾನ್, ಜರ್ಮನಿ, ಆಸ್ಟ್ರೇಲಿಯಾ, ಡೆನ್ಮಾರ್ಕ್, ಪೋಲಂಡ್, ಇಟಲಿ, ಬ್ರಿಟನ್, ಸ್ಲೊವೆನಿಯಾ, ಬಹರೇನ್ ಮತ್ತು ಸಿಂಗಾಪುರ ಭಾಗವಹಿಸಲಿವೆ ಎಂದು ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಏರೋಸ್ಪೇಸ್, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮತ್ತು ಅತ್ಯಾಧುನಿಕ ತಯಾರಿಕೆ ವಲಯಗಳಲ್ಲಿ ಕರ್ನಾಟಕ ಬಂಡವಾಳ ಹೂಡಿಕೆಗೆ ಮುಂಚೂಣಿಯಲ್ಲಿದೆ. ಈ ಅಂಶವನ್ನು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಮೂಲಕ ಜಾಗತಿಕ ಉದ್ಯಮ ಜಗತ್ತಿಗೆ ಪರಿಚಯಿಸಲಾಗುವುದು ಎಂದು ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳು, ರಕ್ಷಣೆ, ಜೈವಿಕ ತಂತ್ರಜ್ಞಾನ, ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ಗರಿಷ್ಠ ನಿಖರತೆಯ ಬಿಡಿಭಾಗ ತಯಾರಿಕಾ ವಲಯಗಳಲ್ಲಿನ ಇತ್ತೀಚಿನ ಬೆಳವಣಿಗೆಯ ಮೇಲೆ ಫ್ಯೂಚರ್ ಆಫ್ ಇನ್ನೋವೇಶನ್ ಎಕ್ಸ್‌ಪೋ ಬೆಳಕು ಚೆಲ್ಲಲಿದೆ. ರಾಜ್ಯದ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಇ) ಹಾಗೂ ನವೋದ್ಯಮ ಬೆಳವಣಿಗೆಗೆ ವೇಗ ನೀಡಲಿದೆ. ಮೂಲ ಸಲಕರಣೆ ತಯಾರಿಸುವ (ಒಇಎಂ) ದೊಡ್ಡ ಕಂಪನಿಗಳ ಜೊತೆಗೆ ವಹಿವಾಟು ಕುದುರಿಸಿಕೊಳ್ಳಲು ಎಸ್‌ಎಂಇಗಳಿಗೆ ನೆರವಾಗಲು ಕೃತಕ ಬುದ್ಧಿಮತ್ತೆ ಆಧಾರಿತ ಅಂತರ್ಜಾಲ ತಾಣ ಅಭಿವೃದ್ಧಿಪಡಿಸಲಾಗಿದೆ. ಬಂಡವಾಳ ಹೂಡಿಕೆ ಸುಲಲಿತಗೊಳಿಸಲು ಎಐ ನೆರವಿನ ಏಕಗವಾಕ್ಷಿ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಇದು ಭೂಮಿ ಹಂಚಿಕೆ, ಹೂಡಿಕೆದಾರರ ಕುಂದುಕೊರತೆ ನಿವಾರಣೆಗೆ ನೆರವಾಗಲಿದೆ.
ʼಬೆಳವಣಿಗೆಯ ಮರು ವ್ಯಾಖ್ಯಾನʼ ಘೋಷಣೆಯಡಿ ನಡೆಯುತ್ತಿರುವ ಜಿಮ್ – 2025ರಲ್ಲಿ 80% ರಷ್ಟು ಅನುಷ್ಠಾನ ಬದ್ಧತೆಯ ಖಚಿತತೆ ಇರುವ ಹೂಡಿಕೆ ಒಪ್ಪಂದಗಳು ಮಾತ್ರ ನಡೆಯಲಿವೆ. ಈಗಾಗಲೇ ಮಾತುಕತೆ ನಡೆದಿರುವ ಸುಮಾರು ರೂ.7 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವನೆಗಳಿಗೆ ಜಿಮ್‌ನಲ್ಲಿ ಒಪ್ಪಂದವಾಗಲಿದೆ. ಉದ್ದೇಶಿತ ಕ್ವಿನ್ ಸಿಟಿ, ಸ್ವಿಫ್ಟ್ ಸಿಟಿ, ಜೀನ್ಸ್ ಕ್ಲಸ್ಟರ್ ಸೇರಿ ನಾನಾ ವಲಯಗಳಲ್ಲಿ ಸುಮಾರು ರೂ.10 ಲಕ್ಷ ಹೂಡಿಕೆ ಒಪ್ಪಂದಗಳಿಗೆ ಇನ್ವೆಸ್ಟ್ ಕರ್ನಾಟಕ ವೇದಿಕೆಯಾಗುವ ಸ್ಪಷ್ಟತೆಯಿದೆ ಎಂದು ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.