ಉಡುಪಿ: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಧುಮೇಹ ಆರೈಕೆಗೆ ಅವಕಾಶ, ಈಗಲ್ಲವಾದರೇ ಮತ್ತೆ ಯಾವಾಗ? ಎಂಬ ಘೋಷ ವಾಕ್ಯದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ ವಿಭಾಗ, ಜಿಲ್ಲಾ ಸರ್ವೇಕ್ಷಣ ಘಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಭಾರತೀಯ ವೈದ್ಯಕೀಯ ಸಂಘ, ಉಡುಪಿ ಕರಾವಳಿ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಮಧುಮೇಹ ಜಾಗೃತಿ ಜಾಥಾ ವನ್ನು ಜಿಲ್ಲಾ ಆಸ್ಪತ್ರೆ, ಉಡುಪಿ ಮುಂಭಾಗದಲ್ಲಿ, ಜಿಲ್ಲಾ ಸರ್ಜನ್ ಡಾ.ಮದುಸೂಧನ ನಾಯಕ ಮಧುಮೇಹ ಆರೈಕೆ ಮತ್ತು ಜಾಗೃತಿ ಕುರಿತ ಪೋಸ್ಟರ್ ಮತ್ತು ಕರಪತ್ರಗಳನ್ನು ಅನಾವರಣ ಮಾಡುವದರ ಮೂಲಕ ಇಂದು ಚಾಲನೆ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಐ.ಎಂ.ಎ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷ ಡಾ.ವಿನಾಯಕ ಶೆಣೈ, ಐ.ಎಂ.ಎ. ಕಾರ್ಯದರ್ಶಿ ಡಾ. ಗಣಪತಿ ಹೆಗ್ಡೆ, ಟಿ.ಎಂ.ಎ ಪೈ ಆಸ್ಪತ್ರೆ ತಜ್ಞ ವೈದ್ಯ ಡಾ.ಶರತ್, ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ.ಸುಜಿತ್, ಎನ್.ಹೆಚ್.ಎಂ. ಜಿಲ್ಲಾ ಲೆಕ್ಕ ಪತ್ರ ವ್ಯವಸ್ಥಾಪಕ ಗಿರೀಶ ಕಡ್ಡಿಪುಡಿ, ಜಿಲ್ಲಾ ಆಸ್ಪತ್ರೆಯ ಅಧಿಕಾರಿ ಮತ್ತು ಸಿಬ್ಬಂದಿಗಳು, ವಿದ್ಯಾ ಸ್ಕೂಲ್ ಆಫ್ ನರ್ಸಿಂಗ್, ಉಡುಪಿ ಸ್ಕೂಲ್ ಆಫ್ ನರ್ಸಿಂಗ್, ಹೈಟೆಕ್ ಸ್ಕೂಲ್ ಆಫ್ ನರ್ಸಿಂಗ್ ನ್ಯೂ ಸಿಟಿ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದರು.
ಉಡುಪಿ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು ಮದುಮೇಹ ಜಾಗೃತಿ ಕುರಿತು ಕಿರು ನಾಟಕ ಮಾಡಿದರು. ಐ.ಎಂ.ಎ ಭವನ ದಲ್ಲಿ ಮಧುಮೇಹ ರೋಗದ ಆರೈಕೆ ಮತ್ತು ಜಾಗೃತಿ ಬಗ್ಗೆ ತಜ್ಞ ವೈದ್ಯ ಡಾ.ಆರ್.ಎನ್.ಭಟ್ ಉಪನ್ಯಾಸ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಎನ್.ಸಿ.ಡಿ ಕಾರ್ಯಕ್ರಗಳ ಬಗ್ಗೆ ಮಾತನಾಡಿದರು. ಐ.ಎಂ.ಎ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷ ಡಾ.ವಿನಾಯಕ ಶೆಣೈ ಮಧುಮೇಹ ರೋಗಿಯ ಜೀವನ ಶೈಲಿ ಮತ್ತು ಜಾಗೃತಿ ಕುರಿತು ಮಾತನಾಡಿದರು. ಆಪ್ತ ಸಮಾಲೋಚಕ ಮನು ಎಸ್ ಬಿ ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು.