ಉಡುಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ತೈಲಬೆಲೆ ಏರಿಕೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಡಯಾನಾ ವೃತ್ತದ ಶೆಟ್ಟಿ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡುತ್ತಾ, 1 ಲೀಟರ್ ಪೆಟ್ರೋಲ್ ಮೂಲಬೆಲೆ ಕಚ್ಚಾತೈಲಕ್ಕೆ 31 ರೂಪಾಯಿ. ಸಂಸ್ಕರಣೆ ವೆಚ್ಚ ಹಾಗೂ ಡೀಲರ್ ಕಮಿಷನ್ ಸೇರಿ 39 ರೂಪಾಯಿ ಆಗುತ್ತದೆ. ರಾಜ್ಯ ಸರಕಾರದ ವ್ಯಾಟ್ ಹಾಗೂ ಸ್ಥಳೀಯ ತೆರಿಗೆ 25.32 ಹಾಗೂ ಕೇಂದ್ರದ ಅಬಕಾರಿ ಸುಂಕ 35 ರೂಪಾಯಿ ಸೇರಿ ಒಟ್ಟು ಪೆಟ್ರೋಲ್ ಬೆಲೆ ಲೀಟರಿಗೆ 100 ರೂಪಾಯಿಗೂ ಮಿಕ್ಕಿದೆ. ಕೇಂದ್ರದ ನರೇಂದ್ರ
ಮೋದಿ ಸರಕಾರದ ಜನವಿರೋಧಿ ನೀತಿಗೆ ಧಿಕ್ಕಾರ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ ಮಾತನಾಡುತ್ತಾ, ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ನಿಗದಿಯಾಗುವುದು ಎಂದು ಹೇಳುತ್ತಾರೆ. ಆದರೆ ಹತ್ತಿರದ ಪಾಕಿಸ್ತಾನ, ಬರ್ಮಾ, ಬೂತಾನ್, ಇಂಡೊನೇಷ್ಯದಲ್ಲಿ 50- 60 ರೂಪಾಯಿಗೆ ಪೆಟ್ರೋಲ್ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದರು. ಕೊರೊನಾ ಸಂಕಷ್ಟದ ಸಮಯದಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಗಾಯದ ಮೇಲೆ ಬರೆ ಎಳೆದು ಸಂಕಷ್ಟಕ್ಕೆ ದೂಡಿದಂತಾಗಿದೆ ಎಂದು ಅಭಿಪ್ರಾಯಪಟ್ಟರು. ಉದ್ಯಾವರ ನಾಗೇಶ್ ಕುಮಾರ್ ಮತ್ತು ಜ್ಯೋತಿ ಹೆಬ್ಬಾರ್ ಈ ಸಂದರ್ಭದಲ್ಲಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಬಿ. ಕುಶಲ್ ಶೆಟ್ಟಿ, ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರಾ, ಕೀರ್ತಿ ಶೆಟ್ಟಿ, ಬ್ಲಾಕ್ ಉಪಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ನಗರಸಭೆ ವಿರೋಧ ಪಕ್ಷದ ನಾಯಕರಾದ ರಮೇಶ್ ಕಾಂಚನ್, ಎಸ್.ಸಿ. ಘಟಕದ ಅಧ್ಯಕ್ಷರಾದ ಗಣೇಶ್ ನೆರ್ಗಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ಮಾಧವ ಬನ್ನಂಜೆ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಉಡುಪಿ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ, ಲಕ್ಷ್ಮಣ್ ಪೂಜಾರಿ, ಉದಯ, ಜೈವೀರ್, ಯಾದವ ಆಚಾರ್ಯ, ಸಂಜಯ ಆಚಾರ್ಯ, ಗಣೇಶ್ ದೇವಾಡಿಗ, ಆರ್.ಕೆ. ರಮೇಶ್, ಸುನಿಲ್ ಬೈಲಕೆರೆ, ಯುವ ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ ಹಮದ್, ಶ್ರೀನಿವಾಸ ಹೆಬ್ಬಾರ್, ಕೃಷ್ಣ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.