ಉಡುಪಿ: 2019-21 ನೇ ಸಾಲಿನಲ್ಲಿ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಯನ್ನು 7% ಗೆ ಮಿತಿಗೊಳಿಸಿ ಗಣಕೀಕೃತ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸುವ ಕುರಿತು ಮಾರ್ಗಸೂಚಿ ಪ್ರಕಟಿಸಲಾಗಿರುತ್ತದೆ.
ವರ್ಗಾವಣೆ ವೇಳಾಪಟ್ಟಿಯನ್ವಯ ಜಿಲ್ಲೆಯೊಳಗೆ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ, 1 ರಿಂದ 100 ರ ವರೆಗಿನ ಕ್ರಮಾಂಕಗಳ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ನವೆಂಬರ್ 24 ರಂದು ಮತ್ತು 101 ರಿಂದ 300 ರ ವರೆಗಿನ ಕ್ರಮಾಂಕಗಳ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ನವೆಂಬರ್ 25 ರಂದು, 301 ರಿಂದ 425 ರ ವರೆಗಿನ ಕ್ರಮಾಂಕಗಳ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ, 1 ರಿಂದ 20 ರ ವರೆಗಿನ ಕ್ರಮಾಂಕಗಳ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಮತ್ತು 01 ರಿಂದ 28 ರ ವರೆಗಿನ ಕ್ರಮಾಂಕಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ನವೆಂಬರ್ 26 ರಂದು, 1 ರಿಂದ 23 ರ ವರೆಗಿನ ಕ್ರಮಾಂಕಗಳ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಹಾಗೂ 1 ರಿಂದ 6 ರ ವರೆಗಿನ ಕ್ರಮಾಂಕಗಳ ವಿಶೇಷ ಶಿಕ್ಷಕರಿಗೆ ನವೆಂಬರ್ 27 ರಂದು, 1 ರಿಂದ 100 ರ ವರೆಗಿನ ಕ್ರಮಾಂಕಗಳ ಪ್ರೌಢಶಾಲಾ ಸಹಶಿಕ್ಷಕರಿಗೆ ನವೆಂಬರ್ 29 ರಂದು ಹಾಗೂ 101 ರಿಂದ 269 ರ ವರೆಗಿನ ಕ್ರಮಾಂಕಗಳ ಪ್ರೌಢಶಾಲಾ ಸಹ ಶಿಕ್ಷಕರಿಗೆ ನವೆಂಬರ್ 30 ರಂದು ಬೆಳಗ್ಗೆ 10 ರಿಂದ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯು ನಡೆಯಲಿದೆ.
ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಎಲ್ಲಾ ಶಿಕ್ಷಕರು ನಿಗದಿಪಡಿಸಿದ ವೇಳಾಪಟ್ಟಿಯಂತೆ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಹಾಗೂ ಆದ್ಯತೆ ಮೇರೆಗೆ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿರುವ ಶಿಕ್ಷಕರುಗಳು ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.