ಉಡುಪಿ ಜಿಲ್ಲೆಯಲ್ಲಿ ನಿರ್ಬಂಧ ಸಡಿಲಿಕೆ ಮಾಡಿರುವುದು ಸರಕಾರವೇ ಹೊರತು ಕೊರೊನಾ ಅಲ್ಲ. ಅನ್ ಲಾಕ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು ಇದು ಮುಂದುವರಿದಲ್ಲಿ ಎಪಿಡಮಿಕ್ ಕಾಯ್ದೆ ಪ್ರಕಾರ ಕಠಿಣ ಕ್ರಮಗಳನ್ನು ಜರುಗಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಮಾರ್ಗಸೂಚಿ ಉಲ್ಲಂಘನೆ ಮಾಡುವವರಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಗುರುವಾರ ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಅವರು, ಕೆಲವರ ನಿರ್ಲಕ್ಷ್ಯತನದಿಂದ ಜಿಲ್ಲೆಯ ಜನರು ಅನುಭವಿಸಬೇಕಾಗುತ್ತದೆ.
ಮದುವೆಗೆ 40 ಮಂದಿ ಮಿತಿ ಇದ್ದರೂ ಅದಕ್ಕಿಂತ ಹೆಚ್ಚು ಜನರನ್ನು ಸೇರಿಸುವ ಘಟನೆಗಳು ನಡೆಯುತ್ತಿವೆ. ಸಂಜೆ 5ಗಂಟೆಯವರೆಗೆ ಮಾತ್ರ ಹೊಟೇಲುಗಳಲ್ಲಿ ಕುಳಿತುಕೊಂಡು ತಿನ್ನುವ ಅವಕಾಶ ಇದ್ದರೂ, ಅದನ್ನು ಉಲ್ಲಂಘಿಸಿ ಸಂಜೆ 6ಗಂಟೆಯವರೆಗೂ ಹೊಟೇಲ್ ನಲ್ಲಿ ಕುಳಿತುಕೊಂಡು ತಿನ್ನುವ ಘಟನೆಗಳು ನಡೆಯುತ್ತಿವೆ. ಬಸ್ಸಿನಲ್ಲಿ ಶೇ. 50 ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ ಎಂದು ಪದೇ ಪದೇ ಹೇಳಿದರೂ ಬಸ್ಸಿನಲ್ಲಿ ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ಹತ್ತಿಸುವ ಘಟನೆ ಕೂಡ ನಡೆಯುತ್ತಿದೆ.
ಯಾರಿಗೂ ಕಾರ್ಯಕ್ರಮ ನಡೆಸಲು ಅನುಮತಿ ಇಲ್ಲ. ಕೆಲವು ಪಕ್ಷ, ಸಂಘ ಸಂಸ್ಥೆಗಳು ದಿನಂಪ್ರತಿ ಕಾರ್ಯಕ್ರಮ, ಪ್ರತಿಭಟನೆ ನಡೆಸುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ಇವುಗಳಿಗೆಲ್ಲಾ ಯಾವುದೇ ಅವಕಾಶ ಮತ್ತು ಅನುಮತಿ ಇಲ್ಲ. ಇವುಗಳಿಂದ ಜಿಲ್ಲೆಯ ಸಾರ್ವಜನಿಕರಿಗೆ ತೊಂದರೆತಾಗುತ್ತಿದ್ದು, ಜಿಲ್ಲೆಯಲ್ಲಿ ಹಗುರವಾಗಿ ನಿಯಂತ್ರಣಕ್ಕೆ ಬರುತ್ತಿರುವ ಕೊರೊನಾ ಸೋಂಕು ಉಲ್ಭಣಗೊಳ್ಳುವಲ್ಲಿ ಇಂತಹ ಘಟನೆಗಳು ಪೂರಕ ವಾತಾವರಣ ನಿರ್ಮಿಸುತ್ತವೆ.
ಕಾನೂನು ಎಲ್ಲರಿಗೂ ಒಂದೇ. ಪ್ರತಿಯೊಬ್ಬರೂ ಸರಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಸರಕಾರದ ಅನ್ ಲಾಕ್ ಮಾರ್ಗಸೂಚಿಗಳ ಪ್ರಕಾರ ರಾಜ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದ್ದು ಸರಕಾರದ ಮುಂದಿನ ಆದೇಶ ಬರುವವರೆಗೂ ಯಾವುದೇ ಕಾರ್ಯಕ್ರಮಗಳನ್ನು ಯಾರೂ ಕೂಡ ಆಯೋಜನೆ ಮಾಡುವಂತಿಲ್ಲ. ಈ ಮನವಿಗೆ ಬೆಲೆ ಕೊಡದಿದ್ದರೆ ಎಪಿಡಮಿಕ್ ಕಾಯ್ದೆ ಪ್ರಕಾರ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.