Home ಸುದ್ಧಿಗಳು ಪ್ರಾದೇಶಿಕ ಯಕ್ಷಗಾನ ಕೃತಿ ಪ್ರಶಸ್ತಿಗೆ ಡಾ. ದಾಮ್ಲೆ ಆಯ್ಕೆ

ಯಕ್ಷಗಾನ ಕೃತಿ ಪ್ರಶಸ್ತಿಗೆ ಡಾ. ದಾಮ್ಲೆ ಆಯ್ಕೆ

452
0

ಮಂಗಳೂರು: ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರದ ‘ದಶಮ ಸಂಭ್ರಮ’ದ ಅಂಗವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ದಶಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದ್ದಾರೆ. ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲಿ ಕೃತಿ ರಚನೆಗಾಗಿ ಸುಳ್ಯದ ಡಾ. ಚಂದ್ರಶೇಖರ ದಾಮ್ಲೆಯವರು ಹಾಗೂ ಡಾ. ಉಪ್ಪಂಗಳ ರಾಮಭಟ್ ರವರು ‘ಕೃತಿ ಪ್ರಶಸ್ತಿಗೆ’ ಆಯ್ಕೆಯಾಗಿದ್ದಾರೆ.

ಒಂಭತ್ತು ಮಂದಿ ಮುಮ್ಮೇಳ ಹಾಗೂ ಆರು ಮಂದಿ ಹಿಮ್ಮೇಳ ಕಲಾವಿದರು ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಸನ್ಮಾನ ಸಮಾರಂಭವು ನವಂಬರ್ ಕೊನೆಯವಾರದಲ್ಲಿ ಜರುಗಲಿದೆ.

ಪ್ರಸ್ತುತ ಸುಳ್ಯದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ವಿಶ್ರಾಂತ ಸಮಾಜಶಾಸ್ತ್ರ ಪ್ರಾಧ್ಯಾಪಕರು. ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದು ಯಕ್ಷಗಾನ ಪ್ರಸಂಗಕರ್ತರು, ವಿಮರ್ಶಕರು ಮತ್ತು ನಿರ್ದೇಶಕರು ಕೂಡಾ ಆಗಿದ್ದಾರೆ.

ಯಕ್ಷಗಾನ ಪರಂಪರೆಯ ಉಳಿವಿಗಾಗಿ ಸುಳ್ಯದಲ್ಲಿ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಿ ಅನೇಕ ಯಕ್ಷಗಾನ ಪ್ರದರ್ಶನಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ಕಲಾವಿದರ ಸನ್ಮಾನಗಳು ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.

ಮಕ್ಕಳಲ್ಲಿ ಯಕ್ಷಗಾನಾಸಕ್ತಿಯನ್ನು ಬೆಳೆಸಲು ಮಕ್ಕಳಮೇಳವನ್ನು ಸ್ಥಾಪಿಸಿ ನೂರಾರು ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ. ಸಾಕ್ಷರತೆಯ ಎಚ್ಚರ ಮೂಡಿಸುವುದಕ್ಕಾಗಿ ‘ಅಕ್ಷರವಿಜಯ’ ಪ್ರಸಂಗವನ್ನು ಬರೆದು ಹಳ್ಳಿಗಳಲ್ಲಿ ಪ್ರದರ್ಶನಗಳನ್ನು ನಡೆಸಿದ್ದಾರೆ. ಇವರು ಬರೆದ “ಓ ಲಕ್ಷ್ಮಣಾ” ಪ್ರಸಂಗವನ್ನು ಕರ್ನಾಟಕ ಮೇಳದವರು ದಿ. ದಾಮೋದರ ಮಂಡೆಚರ ನಿರ್ದೇಶನದಲ್ಲಿ ಒಂದು ತಿರುಗಾಟವಿಡೀ ಆಡಿದ್ದಾರೆ.

ಸೋಮವಾರ ವ್ರತ ಮಹಾತ್ಮೆ, ಮಣಿಮಲ್ಲಿಕಾ ಪರಿಣಯ, ಏಕಲವ್ಯ ಇವು ಇವರು ಬರೆದ ಪ್ರಸಂಗಗಳು. ಸಂಪೂರ್ಣ ರಾಮಾಯಣದ ಸರಣಿ ಪ್ರದರ್ಶನಗಳು ಮತ್ತು ಸಂಪೂರ್ಣ ಮಹಾಭಾರತದ ಹನ್ನೊಂದು ದಿನಗಳ ಪ್ರದರ್ಶನಗಳನ್ನು ಏರ್ಪಡಿಸಿದ್ದು ಇವರ ಮಹಾ ಸಾಧನೆಯಾಗಿದೆ.

ಅನೇಕ ಸಾಹಿತ್ಯಿಕ ಕೃತಿಗಳಲ್ಲದೆ ಯಕ್ಷಗಾನ ರಂಗಭಾಷೆ, ಮಹಾಭಾರತ ಪ್ರದರ್ಶನಗಳ ರಂಗಭಾಷೆ, ಮಹಾಭಾರತದ ಮಹಾಪಾತ್ರಗಳು ಇವರ ಪ್ರಮುಖ ಕೃತಿಗಳಾಗಿವೆ. ಇವರಿಗೆ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿದ್ದು ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಕೃತಿ ಪ್ರಶಸ್ತಿಗೂ ಆಯ್ಕೆಯಾಗಿದ್ದಾರೆ.

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದು ಪಿ.ಎಚ್. ಡಿ. ಪದವಿ ಗಳಿಸಿದ ಇವರಿಗೆ “ಅತ್ಯುತ್ತಮ ಕಾಲೇಜು ಪ್ರಾಧ್ಯಾಪಕ ಪ್ರಶಸ್ತಿ”ಯೂ ಲಭಿಸಿದೆ.

ವಿವಿಧ ಸನ್ಮಾನ ಮತ್ತು ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟ ಡಾ. ದಾಮ್ಲೆಯವರು ಸುಳ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ವಿಶಿಷ್ಟ ಶಾಲೆಯೊಂದನ್ನು ನಡೆಸುತ್ತಿದ್ದು “ಜಿಲ್ಲಾಕನ್ನಡ ಜಾಗೃತಿ ಸಮಿತಿಯ” ಸದಸ್ಯರಾಗಿದ್ದಾರೆ. ಪರಿಸರ ಸಂರಕ್ಷಣೆಗಾಗಿ ‘ಅರಣ್ಯ ಮಿತ್ರ’ ಮತ್ತು ‘ಜಲಮಿತ್ರ’ ಪ್ರಶಸ್ತಿಗಳೊಂದಿಗೆ ಸರಕಾರದಿಂದ ಸಮ್ಮಾನಿಸಲ್ಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.