ಉಡುಪಿ, ಅ.10: ಕರಾವಳಿಯು ಸಮೃದ್ಧ ಸಾಂಸ್ಕೃತಿಕ ಹಾಗೂ ಮೌಖಿಕ ಪರಂಪರೆ ಹೊಂದಿದೆ. ಇಲ್ಲಿನ ಪರಂಪರೆಯನ್ನು ಕಥೆ ಕವನಗಳಲ್ಲಿ ಕಾಣಬಹುದು. ಆದರೆ ಇವತ್ತು ಹೇಳುವ ಹಾಗೂ ಕೇಳುವ ಅಭ್ಯಾಸ ಕ್ಷೀಣವಾಗಿದೆ. ಸಾಹಿತ್ಯವನ್ನು ಆಸ್ವಾದಿಸುವ ಮನಸ್ಸುಗಳು ಕಡಿಮೆಯಾಗಿದೆ. ಸಾಹಿತ್ಯ ಕೃತಿಗಳು ಬದುಕನ್ನು ಸೂಕ್ಷ್ಮವಾಗಿ ಅರ್ಥೈಸಲು ಸಹಕಾರಿ. ಯುವ ಜನರು ಸಾಹಿತ್ಯ ಕೃತಿಗಳನ್ನು ಹೆಚ್ಚು ಓದಬೇಕು ಎಂದು ಖ್ಯಾತ ಸಾಹಿತಿ ಡಾ ರೇಖಾ ವಿ ಬನ್ನಾಡಿ ಅಭಿಪ್ರಾಯಪಟ್ಟರು. ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಉಡುಪಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಅಜ್ಜರಕಾಡು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಗ್ರಂಥಾಲಯದಲ್ಲಿ ನಮ್ಮ ಸಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೆಲ್ಲಾ ಗ್ರಂಥಾಲಯಗಳು ತುಂಬಿ ತಳುಕುತ್ತಿದ್ದವು ಆದರೆ ಈಗ ಬಿಕೋ ಎನ್ನುತ್ತಿವೆ. ಕುವೆಂಪು, ಕಾರಂತ, ವೈದೇಹಿ, ಸಾರಾ, ಲಂಕೇಶ್, ತೇಜಸ್ವಿ, ದೇವನೂರ ಅಂತಹ ಮೇರು ಸಾಹಿತಿಗಳ ನಾಡು ನಮ್ಮದು. ಪುಸ್ತಕಗಳು ಇಂದು ಕಪಾಟಿನ ಒಳಗೆ ಸೀಮಿತವಾಗಿವೆ. ಇದಕ್ಕೆ ಬದಲಾಗುತ್ತಿರುವ ಸಮಾಜದ ಆದ್ಯತೆ ಕಾರಣ. ಇಂತಹ ಸಂದರ್ಭದಲ್ಲಿ ಸಾಹಿತಿಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಹಾಗೂ ಗ್ರಂಥಾಲಯಗಳು ನಡೆಸುವ ಕಾರ್ಯಕ್ರಮಗಳು ಅಪೂರ್ವ ಎಂದರು.
ಇಂದಿನ ಲಾಭ ನಷ್ಟದ ಲೆಕ್ಕಾಚಾರದ ಜಗತ್ತಿನಲ್ಲಿ ಸಾಹಿತ್ಯ ಪ್ರೀತಿ ಕಡಿಮೆಯಾಗಿದೆ. ಮಾನಸಿಕ ಒತ್ತಡದ ಬದುಕನ್ನು ಧೈರ್ಯ, ಸಂಯಮದಿಂದ ಎದುರಿಸಲು ಸಾಹಿತ್ಯ ಸಹಾಯಕ. ಜೀವನದಲ್ಲಿ ಗೆಲುವಿನ ಜೊತೆ ಸೋಲನ್ನು ಹೇಗೆ ಸವಾಲಾಗಿ ಸ್ವೀಕರಿಸಬೇಕು ಎನ್ನುವುದನ್ನು ಹಾಗೂ ಮೂಲಭೂತ ಮಾನವಿಕ ಮೌಲ್ಯ ಗಳನ್ನು ವೈಚಾರಿಕ ಸಾಹಿತ್ಯದ ಮೂಲಕ ಅರಿಯಬಹುದು. ಸಾಹಿತ್ಯವು ಎಲ್ಲರನ್ನೂ ಸಮಾನತೆ, ಸಹಾನುಭೂತಿಯಿಂದ ನೋಡಲು ಕಲಿಸಿ ಕೊಡುತ್ತದೆ. ಯಶಸ್ವಿ ವ್ಯಕ್ತಿಗಳ ಆತ್ಮಕಥನಗಳಿಂದ ನಾವು ಜೀವನವನ್ನು ಎದುರಿಸುವ ಬಗೆಗಿನ ಪಾಠ ಕಲಿಯಬಹುದು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್ ಪಿ, ಗೌರವ ಕಾರ್ಯದರ್ಶಿ ರಂಜನಿ ವಸಂತ್ ಉಪಸ್ಥಿತರಿದ್ದರು. ಪ್ರಥಮ ದರ್ಜೆ ಸಹಾಯಕಿ ಶಕುಂತಲ ನಿರೂಪಿಸಿದರು.




By
ForthFocus™