Saturday, October 17, 2026
Saturday, October 17, 2026

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮರು ಸರ್ವೇ ಕಾರ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಿ: ಅಶೋಕ್ ಕುಮಾರ್ ಕೊಡವೂರು

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮರು ಸರ್ವೇ ಕಾರ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಿ: ಅಶೋಕ್ ಕುಮಾರ್ ಕೊಡವೂರು

Date:

ಉಡುಪಿ, ಸೆ.26: ಗ್ಯಾರಂಟಿ ಯೋಜನೆಗಳ ಮರುಸರ್ವೇ ಕಾರ್ಯವನ್ನು ಕೈಗೊಳ್ಳುವಾಗ ಗ್ಯಾರಂಟಿ ಯೋಜನೆಯ ಯಾವುದೇ ಒಬ್ಬ ಅರ್ಹ ಫಲಾನುಭವಿಗಳು ಹೊರಗುಳಿಯದಂತೆ ಎಚ್ಚರಿಕೆ ವಹಿಸಿ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸೂಚನೆ ನೀಡಿದರು. ಅವರು ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳ ನೈಜ ಫಲಾನುಭವಿಗಳನ್ನು ಗುರುತಿಸುವ ಪರಿಶೀಲನೆ ಕಾರ್ಯಗಳನ್ನು ಕೈಗೊಳ್ಳುವಾಗ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸೂಕ್ತವಾಗಿ ಪರಿಶೀಲಿಸುವುದರೊಂದಿಗೆ ಯಾವುದೇ ಒಬ್ಬ ಅರ್ಹ ಫಲಾನುಭವಿಗಳು ಈ ಯೋಜನೆಗಳಿಂದ ಹೊರಗುಳಿಯದಂತೆ ಕ್ರಮವಹಿಸಬೇಕು ಎಂದರು.

ಗೃಹಲಕ್ಷ್ಮಿ ಫಲಾನುಭವಿಗಳನ್ನು ಗುರುತಿಸುವ ಪರಿಶೀಲನಾ ಕಾರ್ಯಕ್ಕಾಗಿ ಈಗಾಗಲೇ 1050 ಗಣತಿದಾರರನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಮೊಬೈಲ್ ಆಪ್ ಮೂಲಕ ಕೈಗೊಳ್ಳಲು ಗಣತಿದಾರರಿಗೆ ತರಬೇತಿ ನೀಡಿ, ಅವರುಗಳು ಮನೆ ಮನೆ ಭೇಟಿ ಸಂದರ್ಭದಲ್ಲಿ ಫಲಾನುಭವಿಗಳ ಸೂಕ್ತ ಮಾಹಿತಿಯನ್ನು ಕಲೆಹಾಕಿ ಯಾರೊಬ್ಬ ಅರ್ಹರೂ ವಂಚಿತರಾಗದಂತೆ ನೋಡಿಕೊಳ್ಳಲು ಸೂಚನೆ ನೀಡಬೇಕೆಂದರು. ಅನ್ನ ಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಪಡಿತರ ಚೀಟಿದಾರರು ಇ-ಕೆವೈಸಿ ಯನ್ನು ತಪ್ಪದೇ ಮಾಡಿಸಬೇಕು. ಜಿಲ್ಲೆಯಲ್ಲಿ ಇದರ ಪ್ರಗತಿ ಕುಂಠಿತವಾಗಿದೆ. ಕೆಲವು ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆಯಿಂದ ಪ್ರಗತಿ ಸಾಧಿಸಲಾಗುತ್ತಿಲ್ಲ ಎಂದು ಕೇಳಿ ಬರುತ್ತಿದೆ. ಇದಕ್ಕೆ ಇಲಾಖಾ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ, ಪ್ರತಿಶತಃ ನೂರರಷ್ಟು ಪ್ರಗತಿ ಸಾಧಿಸಬೇಕು ಎಂದರು.

ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 3,64,000 ಜನರು ನೋಂದಣಿಯಾಗಿದ್ದು, ಈಗಾಗಲೇ 3.17 ಲಕ್ಷ ಫಲಾನುಭವಿಗಳ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಪ್ರತಿಯೊಂದು ಮನೆಗೂ ಈಗಾಗಲೇ ಗುರುತಿನ ಚೀಟಿಯನ್ನು ಇಲಾಖೆಯ ವತಿಯಿಂದ ಅಂಟಿಸಲಾಗಿದೆ. ಬಾಕಿ ಉಳಿದ 47,000 ಮನೆಗಳ ಸರ್ವೇ ಕಾರ್ಯಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಶಕ್ತಿ ಯೋಜನೆಯಡಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯುವಂತೆ ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ಬಸ್ ನ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಂದ ಬಸ್‌ಗಳ ಬಿಡುಗಡೆಗೆ ಬೇಡಿಕೆಗಳು ಹಾಗೂ ಮನವಿಗಳು ಬರುತ್ತಿವೆ. ಸಾಧ್ಯವಾದಷ್ಟು ವಿದ್ಯಾರ್ಥೀಗಳೂ ಹಾಗೂ ಗ್ರಾಮೀಣ ಭಾಗದ ಜನರು ಈ ಯೋಜನೆಯ ಲಾಭ ಪಡೆಯಲು ಅನುಕೂಲವಾಗುವಂತೆ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ವ್ಯವಸ್ಥೆಯನ್ನು ಮಾಡಬೇಕು ಎಂದು ಕೆ.ಎಸ್.ಆರ್.ಟಿ.ಸಿ ಮತ್ತು ಪ್ರಾದೇಶಿಕ ಸಾರಿಗೆ ಪದಾಧಿಕಾರಿಗಳಿಗೆ ತಿಳಿಸಿದರು. ಯುವ ನಿಧಿ ಯೋಜನೆಯಡಿ 5276 ಅಭ್ಯರ್ಥಿಗಳು ನೋಂದಣಿಯಾಗಿದ್ದು, 5016 ಫಲಾನುಭವಿಗಳಿಗೆ 13.67 ಕೋಟಿ ರೂ. ನೇರ ನಗದನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ ಎಂದ ಅವರು, ಪ್ರತಿ ವರ್ಷವೂ ಹೊಸ ಫಲಾನುಭವಿಗಳು ಆಯ್ಕೆ ಆಗುವ ಹಿನ್ನೆಲೆ, ಈ ಯುವನಿಧಿ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ಭಾರತ್ ಜೋಡೋ ಯುವ ಸಂಘಗಳ ಸದಸ್ಯರುಗಳ ನೋಂದಣಿ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಪ್ರತೀ ಗ್ರಾಮ ಪಂಚಾಯತಿ, ವಾರ್ಡ್ಗಳಲ್ಲಿಯೂ ಸಮಿತಿಗಳ ರಚನೆಗೆ ಇಲಾಖಾ ಅಧಿಕಾರಿಗಳೊಂದಿಗೆ ಗ್ಯಾರಂಟಿ ಯೋಜನೆಗಳ ತಾಲೂಕು, ಹೋಬಳಿ ಮಟ್ಟದ ಪದಾಧಿಕಾರಿಗಳು ಕೈಜೋಡಿಸಿ, ಯೋಜನೆಯ ಯಶಸ್ಸಿಗೆ ಸಹಕರಿಸಬೇಕು ಎಂದರು. ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಜಿಲ್ಲೆಯ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಶ್ರಮಿಸಬೇಕು. ಯೋಜನೆಗೆ ಅರ್ಹರಿರುವ ಯಾವುದೇ ಫಲಾನುಭವಿಯೂ ಗ್ಯಾರಂಟಿ ಯೋಜನೆಗಳಿಂದ ದೂರ ಉಳಿಯಬಾರದು ಹಾಗೂ ಈ ಯೋಜನೆಯ
ಯಶಸ್ವಿಗೂ ಎಲ್ಲರೂ ಸಹಕರಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಉದಯಕುಮಾರ್ ಶೆಟ್ಟಿ, ಸತೀಶ್, ಗೀತಾ ವಾಗ್ಲೆ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರಾದ ರಮೇಶ್ ಕಾಂಚನ್, ಸುನೀತಾ ಶೆಟ್ಟಿ, ನವೀನ್ ಚಂದ್ರ, ಮೋಹನ್ ಪೂಜಾರಿ, ಶಂಕರ ಶೇರಿಗಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!