ಕಟಪಾಡಿ, ಜು.23: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ಮತ್ತು ಬಿ.ಸಿ.ಎ. ವಿದ್ಯಾರ್ಥಿಗಳಿಗಾಗಿ ಓರಿಯೆಂಟೇಷನ್ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಸಿ.ಎ. ಗೋಪಾಲಕೃಷ್ಣ ಭಟ್ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ಜೀವನವು ಹೊಸ ಅವಕಾಶಗಳು ಮತ್ತು ಅನೇಕ ಸಾಧ್ಯತೆಗಳ ಆರಂಭವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಸಾಮರ್ಥ್ಯವನ್ನು ಗುರುತಿಸಿಕೊಂಡು ಶಿಸ್ತು, ಸಮಯಪಾಲನೆ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು. ಕಾಲೇಜು ಜೀವನವು ಕೇವಲ ಪಠ್ಯಾಭ್ಯಾಸಕ್ಕೆ ಸೀಮಿತವಾಗದೆ, ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸಂವಹನ ಕೌಶಲ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ವೇದಿಕೆಯಾಗಬೇಕು ಎಂದು ತಿಳಿಸಿದರು.
ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‌ನ ಪ್ರಾಂಶುಪಾಲರಾದ ಪ್ರೊ. ವಿಘ್ನೇಶ್ ಶೆಣೈ, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಕುಲದೀಪ್ ವೈ, ವಿಭಾಗದ ಮುಖ್ಯಸ್ಥೆ ಪ್ರೊ. ಚೇತನಾ, ಹಾಗೂ ಪ್ರೊ. ಆಲ್ಬನ್ ಅಂಥೋನಿ ಅವರು ವಿದ್ಯಾರ್ಥಿಗಳಿಗೆ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ, ಪಠ್ಯಕ್ರಮ, ಪರೀಕ್ಷಾ ವಿಧಾನ, ಶಿಸ್ತು, ಕೌಶಲಾಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಜೊತೆಗೆ ಕಾಲೇಜಿನ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ನೂತನ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದು, ಕಾಲೇಜಿನ ಶೈಕ್ಷಣಿಕ ವಾತಾವರಣ ಮತ್ತು ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಧೀರಜ್ ಬೆಳ್ಳಾರೆ ಕಾರ್ಯಕ್ರಮವನ್ನು ನಿರೂಪಿಸಿದರು.




By
ForthFocus™