ಉಪ್ಪೂರು, ಫೆ.10: ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ವಯೋವಂದನ ಆತಿಥ್ಯ ಗೃಹ ಇದರ ಕಟ್ಟಡದ ಭೂಮಿ ಪೂಜೆ ಮತ್ತು ಶಿಲನ್ಯಾಸ ಕಾರ್ಯಕ್ರಮವು ಶ್ರೀ ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮನಕ್ಷತ್ರ (ಸ್ವಾತಿ ನಕ್ಷತ್ರ) ದಂದು ಫೆಬ್ರವರಿ 8 ಆದಿತ್ಯವಾರ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ಜರುಗಿತು. ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್ ರವರು ಭೂಮಿ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿ ವಯೋವಂದನ ಆತಿಥ್ಯ ಗೃಹದ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ವಾನ್ ಹರಿಪ್ರಸಾದ್ ಶರ್ಮ ಮತ್ತು ಸತ್ಯನಾರಾಯಣ ಭಟ್ ರವರು ಸಹಕರಿಸಿದರು. ಬೆಳಿಗ್ಗೆ ಅಮ್ಮುಂಜೆ ಶ್ರೀ ದಾಮೋದರ ದೇವಸ್ಥಾನದಿಂದ ಶಿಲಾನ್ಯಾಸದ ವಾಸ್ತು ಶಿಲೆಗಳನ್ನು ಶೋಭಾ ಯಾತ್ರೆಯೊಂದಿಗೆ ಉಡುಪಿ ದಕ್ಷಿಣ ಕನ್ನಡ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಸಮಾಜ ಬಂಧುಗಳು ಬೃಹತ್ ಮೆರವಣಿಗೆಯ ಮೂಲಕ ಸಾಲಂಕೃತ ವಾಹನದಲ್ಲಿ ಪೂಜಿಸಿದ ಶಿಲೆಗಳನ್ನಿರಿಸಿ ಉಪ್ಪೂರಿನಲ್ಲಿರುವ ನಿವೇಶನದ ಬಳಿಗೆ ಕರೆತರಲಾಯಿತು.
ನಂತರ ಸಭಾ ಕಾರ್ಯಕ್ರಮ, ಬೆಂಗಳೂರಿನ ಖ್ಯಾತ ಗಾಯಕ ಶಂಕರ ಶಾನ್ಭಾಗ್ ಮತ್ತು ಅವರ ತಂಡದಿಂದ ವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಆರ್ ವಿವೇಕಾನಂದ ಶೆಣೈ, ಕಳೆದ 14 ವರ್ಷಗಳಿಂದ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಆರ್ಥಿಕವಾಗಿ ತೀರ ಸಂಕಷ್ಟದ ಸ್ಥಿತಿಯಲ್ಲಿರುವ ಕುಟುಂಬಗಳಿಗೆ ಪ್ರತಿ ತಿಂಗಳು ಅವರ ಖಾತೆಗಳಿಗೆ ಒಂದು ಸಾವಿರದಿಂದ 2.5 ಸಾವಿರದವರೆಗೆ ಸುಮಾರು 192 ಕುಟುಂಬಗಳಿಗೆ ಕುಟುಂಬ ಚೈತನ್ಯ ನಿಧಿ ನಿಯಮಿತವಾಗಿ ತಲುಪುತ್ತಿದ್ದು, ಕಳೆದ ವರ್ಷ ಯೋಜನೆಯ ದಶಮಾನೋತ್ಸವ ಸಂದರ್ಭದಲ್ಲಿ ಪ್ರತಿ ಕುಟುಂಬಗಳಿಗೆ ರೂಪಾಯಿ 12,೦೦೦/- ಆಪದ್ದನವನ್ನು ನೀಡಲು ಮನೆ ಮನೆ ಭೇಟಿ ನೀಡಿದಾಗ, ಸುಮಾರು 16 ಕುಟುಂಬಗಳು ಸ್ವಂತ ಮನೆ ಅಥವಾ ಬಾಡಿಗೆ ಮನೆಯಲ್ಲಿ ಇರಲಾರದ ಸ್ಥಿತಿಯಲ್ಲಿ ಬೇರೆಯವರ ಆಶ್ರಯದಲ್ಲಿ ಇರುವ ದುಸ್ತಿತಿ ಬಹಳ ವೇದನೆ ತಂದಿತು. ಇಂತಹ ಸಂಕಷ್ಟಮಯ ಪರಿಸ್ಥಿತಿಯಿಂದ ಕುಟುಂಬಗಳನ್ನು ಹೊರತಂದು ಗೌರವಯುತ ಬಾಳ್ವೆಯನ್ನು ನಡೆಸಲು ಅನುಕೂಲವಾಗುವಂತೆ ವಯೋವಂದನ ಆತಿಥ್ಯ ಗೃಹ ಯೋಜನೆಯ ಚಿಂತನೆ ಮೂಡಿಬಂದು ಮತ್ತು ಇದೀಗ ಅದು ಕಾರ್ಯರೂಪಕ್ಕೆ ಬರುತ್ತಿದೆ ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ವೇದಿಕೆಯ ಮಾರ್ಗದರ್ಶಕರಾದ ಚೇಂಪಿ ರಾಮಚಂದ್ರ ಅನಂತ ಭಟ್ ರವರು, ವೇದಿಕೆಯ ಪದಾಧಿಕಾರಿಗಳ ಸಮಾಜಮುಖಿ ಚಿಂತನೆ, ಸಾಮಾಜಿಕ ಕಳಕಳಿಯ ಯೋಜನೆಗಳು ಜನಮಾನಸವನ್ನು ಮುಟ್ಟಿದ್ದು, ಸಮಾಜದಿಂದ ಅಭೂತಪೂರ್ವ ಬೆಂಬಲ ಲಭಿಸುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಡುಪಿಯ ತ್ರಿಷಾ ವಿದ್ಯಾ ಕಾಲೇಜಿನ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ರವರು ಮಾತನಾಡುತ್ತಾ, ಹಿರಿಯರ ಆರೈಕೆ ಸವಾಲಿನ ಕೆಲಸವಾಗಿದ್ದು, ವೇದಿಕೆಯ ಪದಾಧಿಕಾರಿಗಳ ನಿರಂತರ ಶ್ರಮ, ಸಮಾಜದ ಸಹಯೋಗ ಮತ್ತು ದಾನಿಗಳ ನೆರವಿನಿಂದ ಈ ಮಹತ್ವಕಾಂಕ್ಷಿ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳ್ಳಲಿ ಎಂದು ಶುಭ ಹಾರೈಸಿದರು.
ಯೋಜನೆಯ ಮಾರ್ಗದರ್ಶಕರಾದ ಡಾ. ಕಲ್ಯ ಸುರೇಶ್ ಶೆಣೈ ಯವರು ಕುಟುಂಬದ ಹಿರಿಯರನ್ನು ಗೌರವಯುತವಾಗಿ ಜೀವನದ ಕೊನೆಯ ಕಾಲದವರೆಗೂ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಕ್ಕಳಿಲ್ಲದ ದಂಪತಿಗಳು ಅನಿವಾರ್ಯ ಕಾರಣದಿಂದ ವೃದ್ಧಾಪ್ಯದಲ್ಲಿ ಅನುಭವಿಸುವ ನೋವು ಸಂಕಟಗಳಿಗೆ ಈ ಯೋಜನೆ ಶಾಶ್ವತ ಪರಿಹಾರದ ಜೊತೆಗೆ ಸಮುದಾಯದ ಜವಾಬ್ದಾರಿಯನ್ನು ನೆನಪಿಸಿಕೊಡುತ್ತದೆ ಎಂದು ತಿಳಿಸಿದರು. ವೇದಿಕೆಯ ಈ ಮಹತ್ಕಾರ್ಯಕ್ಕೆ ಸಮಾಜದ ನೆರವು ಹರಿದು ಬರುತ್ತಿರುವುದು ಸಂತಸದ ವಿಚಾರ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಿಎಎಸ್ಎಸ್ ನಾಯಕ್ ರವರು, ಬದುಕಿನ ಸಂಕಷ್ಟದ ಸಮಯದಲ್ಲಿ ನೊಂದ ನೂರಾರು ಹಿರಿಯರಿಗೆ ಸಮಾಜದ ದಾನಿಗಳ ನೆರವಿನಿಂದ ಉಚಿತವಾದ ಆಶ್ರಯ ಒದಗಿಸುವ ಯೋಜನೆ ಸಮುದಾಯದ ಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಅಮ್ಮುಂಜೆ ಶ್ರೀ ದಾಮೋದರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಶ್ರೀ ವಿನೋದ ನಾಯಕ್, ಸಮಾಜದ ಗಣ್ಯರಾದ ಮುಂಬೈಯ ಉದ್ಯಮಿ ಮಧು ಭಂಡಾರ್ಕರ್, ಬೆಂಗಳೂರಿನ ಸತ್ಯಭಾಮ ಕಾಮತ್ , ಕುಂಬ್ಳೆ ಶ್ರೀಮತಿ ನಾಯಕ್, ವಿಜಯಕುಮಾರ್ ಶೆಣೈ, ಲೇಖಕಿ ಪ್ರಜ್ವಲಾ ಶೆಣೈ, ರಮ್ಯಾ ನಾಯಕ್, ನಂದ್ಯಾಲ ರಘುವೀರ ಶೆಣೈ ದಂಪತಿ, ದಾನಿಗಳಾದ ವೀರ ಸಿಂಹ ನಾಯಕ್ ದಂಪತಿ, ಮಂಗಳೂರಿನ ಸುಬ್ರಹ್ಮಣ್ಯ ಪ್ರಭು, ಉಡುಪಿಯ ಎಚ್. ನಾಗೇಶ್ ಕಾಮತ್ ಉಪಸ್ಥಿತರಿದ್ದರು. ವೇದಿಕೆಯ ಅಧ್ಯಕ್ಷರಾದ ಜಿ ಸತೀಶ್ ಹೆಗ್ಡೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




By
ForthFocus™