Saturday, February 7, 2026
Saturday, February 7, 2026

ಪೊಲೀಸ್ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಕಾಯ್ದೆಯ ಸ್ಪಷ್ಟ ಅರಿವು ಅಗತ್ಯ: ಮನು ಪಟೇಲ್

ಪೊಲೀಸ್ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಕಾಯ್ದೆಯ ಸ್ಪಷ್ಟ ಅರಿವು ಅಗತ್ಯ: ಮನು ಪಟೇಲ್

Date:

ಉಡುಪಿ, ಫೆ.7: ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳಿಗೆ ಸಂಬಂಧಪಟ್ಟಂತೆ ಮೊದಲನೇ ಹಂತದಲ್ಲಿ ತಳಮಟ್ಟದ ಕಾರ್ಯಕರ್ತರು ಮಕ್ಕಳ ಜೊತೆ ವ್ಯವಹರಿಸಿದರೆ, ಎರಡನೇ ಹಂತದಲ್ಲಿ ಪೊಲೀಸರು ಮಕ್ಕಳ ಜೊತೆ ವ್ಯವಹರಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಪೊಲೀಸರಿಗೆ ಬಾಲ ನ್ಯಾಯ ಕಾಯ್ದೆಯ ಸ್ಪಷ್ಟ ಅರಿವು ಇರಬೇಕಾಗುತ್ತದೆ. ಮಕ್ಕಳ ಜೊತೆ ಸಂವೇದನೆಯಿಂದ ವ್ಯವಹರಿಸಬೇಕಾಗುವುದರಿಂದ ಇಂತಹ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಠಾಣೆಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮತ್ತು ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಪಾಯದಲ್ಲಿ ಸಿಲುಕಿದ ಮಕ್ಕಳನ್ನು ರಕ್ಷಣೆ ಮಾಡುವಾಗ ಅಥವಾ ಅಪರಾಧಿ ಚಟುವಟಿಕೆಗಳಲ್ಲಿ ನಿರತರಾದ ಮಕ್ಕಳನ್ನು ಕಾನೂನಿನ ಸುಪರ್ದಿಗೆ ತೆಗೆದುಕೊಳ್ಳುವ ಸಮಯದಲ್ಲಿ ಬಾಲ ನ್ಯಾಯ ಕಾಯ್ದೆಯ ನಿಯಮಗಳನ್ನು ಪಾಲಿಸಿ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಾಗುತ್ತದೆ. ಸಮವಸ್ತ್ರದಲ್ಲಿರುವ ಪೊಲೀಸರನ್ನು ಕಂಡು ಮಕ್ಕಳು ಬೆದರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಮಕ್ಕಳಿಗೆ ಸಂಬಂಧಪಟ್ಟ ಪ್ರಕರಣಗಳನ್ನು ದೊಡ್ಡವರ ಪ್ರಕರಣಗಳಂತೆ ನೋಡಲಾಗುವುದಿಲ್ಲ. ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರಕ್ರಿಯೆಗಳನ್ನು ನಿಭಾಯಿಸಲು ತರಬೇತಿ ಹೊಂದಿದ ಸಿಬ್ಬಂದಿಗಳನ್ನು ತಯಾರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಸಹಕಾರಿಯಾಗಿವೆ. ಕಾರ್ಯಾಗಾರದಲ್ಲಿ ಪಡೆದ ಜ್ಞಾನವನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ಹೇಳಿದರು.

ಬಾಲ ನ್ಯಾಯ ಮಂಡಳಿಯ ಅಧ್ಯಕ್ಷ, ಎಸಿಜೆಎಮ್ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಂತೋಷ್ ಶ್ರೀವತ್ಸವ್ ಮಾತನಾಡಿ ನ್ಯಾಯಾಲಯ ಮತ್ತು ಪೊಲೀಸ್ ಇಲಾಖೆ ಕಾನೂನಿನ ರಕ್ಷಕರು. ಇಲಾಖೆಯಲ್ಲಿ ಮಕ್ಕಳ ಜೊತೆ ನೇರವಾಗಿ ವ್ಯವಹರಿಸುವ ಸಿಬ್ಬಂದಿಗಳಿಗೆ ಬಾಲ ನ್ಯಾಯ ಕಾನೂನಿನ ಮಾಹಿತಿ ಇರುವುದು ಅಗತ್ಯ. ಮಕ್ಕಳಿಗೆ ಸಂಬಂಧಿಸಿದ ದೂರುಗಳು ಬಂದಾಗ ಅದನ್ನು ನಿರ್ಲಕ್ಷ್ಯ ಮಾಡದೆ ತ್ವರಿತವಾಗಿ ಸ್ಪಂದಿಸಿದಾಗ ಹಲವಾರು ಮುಗ್ದ ಜೀವಗಳನ್ನು ಸಮಯೋಚಿತವಾಗಿ ರಕ್ಷಿಸಬಹುದು ಎಂದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣೆ ಸಂದರ್ಭದಲ್ಲಿ ಮಾಹಿತಿ ಕೊರತೆಯಿಂದ ಸಣ್ಣಪುಟ್ಟ ತಪ್ಪುಗಳಾಗುತ್ತವೆ. ಕಾರ್ಯಾಗಾರಗಳಿಂದ ಕಾನೂನಿನ ಬಗ್ಗೆ ತಿಳುವಳಿಕೆ ಹೆಚ್ಚಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಸಮರ್ಪಕ ಸೇವೆ ನೀಡಲು ಅನುಕೂಲವಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿದ್ದ ಯುನಿಸೆಫ್ ಪ್ರಾದೇಶಿಕ ಸಂಯೋಜಕ ಡಾ. ಕೊಣಿಲ ರಾಘವೇಂದ್ರ ಭಟ್ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜೂಹಿ ದಾಮೋದರ್ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗರತ್ನ ನಾಯಕ್ ಸ್ವಾಗತಿಸಿ, ಮಹೇಶ್ ದೇವಾಡಿಗ ನಿರೂಪಿಸಿ, ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ

ಹೆಮ್ಮಾಡಿ, ಫೆ.7: ಸಂಘಟನೆಯ ಮೂಲಕ ಸಮಾಜದ ಏಳ್ಗೆ ಸಾಧ್ಯವಿದೆ. ಸ್ವಾಭಿಮಾನವನ್ನು ಯಾರಿಗೂ...

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್ ಆಯ್ಕೆ

ಉಡುಪಿ, ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹದಿನಾರನೇ ಕನ್ನಡ...

ತೆಂಕನಿಡಿಯೂರು ರೂ. 58.5 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

ಮಲ್ಪೆ, ಫೆ.6: ತೆಂಕನಿಡಿಯೂರು ಗ್ರಾಮದಲ್ಲಿ ರೂ. 58.50 ಲಕ್ಷ ವೆಚ್ಚದವಿವಿಧ ರಸ್ತೆ...

ಕೋಟ ನಾಗಮಂಡಲೋತ್ಸವದ ಚಪ್ಪರ ಮುಹೂರ್ತ

ಕೋಟ, ಫೆ.೬: ಕೋಟದ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕ:ಪವಿತ್ರ ನಾಗಮಂಡಲೋತ್ಸವಕ್ಕೆ...
error: Content is protected !!