Wednesday, April 1, 2026
Wednesday, April 1, 2026

ಅಸಂಘಟಿತ ಕಾರ್ಮಿಕರು ಕೇಂದ್ರ ಪಿಂಚಣಿ ಯೋಜನೆಗಳ ಲಾಭ ಪಡೆಯುವಂತಾಗಲಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಅಸಂಘಟಿತ ಕಾರ್ಮಿಕರು ಕೇಂದ್ರ ಪಿಂಚಣಿ ಯೋಜನೆಗಳ ಲಾಭ ಪಡೆಯುವಂತಾಗಲಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

Date:

ಉಡುಪಿ, ಜ.22: ಅಸಂಘಟಿತ ವಲಯದ ಕಾರ್ಮಿಕರುಗಳು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಹಾಗೂ ಎನ್.ಪಿ.ಎಸ್ ಟ್ರೇಡರ್ಸ್ ಎಂಬ ಮಹತ್ವಾಕಾಂಕ್ಷಿ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಎಲ್ಲಾ ವರ್ಗದ ಅಸಂಘಟಿತ ಕಾರ್ಮಿಕರುಗಳು ಈ ಯೋಜನೆಗಳಡಿ ನೋಂದಾಯಿಸಿಕೊಳ್ಳುವಂತೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಹಾಗೂ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಗಳಡಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲು ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಗಳಡಿ ಅಸಂಘಟಿತ ವಲಯದ ಕಾರ್ಮಿಕರನ್ನು, ವ್ಯಾಪಾರಿಗಳನ್ನು ಹಾಗೂ ಸ್ವಯಂ ಉದ್ಯೋಗಿಗಳನ್ನು ನೋಂದಾಯಿಸಲು ಜನವರಿ 15 ರಿಂದ ಮಾರ್ಚ್ 15 ರ ವರೆಗೆ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. ವಯಸ್ಸಿಗೆ ಅನುಗುಣವಾಗಿ ಮಾಸಿಕ 55 ರೂ. ಗಳಿಂದ 200 ರೂ. ವರೆಗೆ ವಂತಿಕೆ ಪಾವತಿಸಿದ್ದಲ್ಲಿ 60 ವರ್ಷದ ನಂತರ ತಿಂಗಳಿಗೆ 3000 ರೂ. ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ ಎಂದ ಅವರು, ಆದಾಯ ತೆರಿಗೆ ಪಾವತಿದಾರರು, ಇ.ಎಸ್.ಐ, ಇ.ಪಿ.ಎಫ್, ಎನ್.ಪಿ.ಎಸ್ ಯೋಜನೆಯ ಫಲಾನುಭವಿಗಳಿಗೆ ಈ ಯೋಜನೆಯಡಿ ನೋಂದಾಯಿಸಲು ಅವಕಾಶವಿರುವುದಿಲ್ಲ ಎಂದರು. 18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ತಮ್ಮ ಆಧಾರ್ ಕಾರ್ಡ್, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಮೊದಲ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಯಾಗುವುದರೊಂದಿಗೆ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ ಎಂದ ಅವರು, ಹೆಚ್ಚು ಅಸಂಘಟಿತ ಕಾರ್ಮಿಕರುಗಳು ವಾಸಿಸುವ ಸ್ಥಳಗಳಲ್ಲಿ, ಕಾರ್ಮಿಕರು ಸೇರಿವಂತಹ ವಿವಿಧ ಸಮಾರಂಭಗಳಲ್ಲಿ ಶಿಬಿರಗಳನ್ನು ಆಯೋಜಿಸಿ, ಯೋಜನೆಯ ಕುರಿತು ಅರಿವು ಮೂಡಿಸುವುದರೊಂದಿಗೆ ವಿಶೇಷ ನೋಂದಣಿ ಅಭಿಯಾನದಡಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ನೋಂದಾಯಿಸಲು ಅಗತ್ಯ
ಕ್ರಮ ವಹಿಸಬೇಕೆಂದರು.

ಯೋಜನೆಯಡಿ ಜಿಲ್ಲೆಯಲ್ಲಿ 7275 ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲು ಗುರಿ ನಿಗಧಿಪಡಿಸಲಾಗಿದ್ದು, ನರೇಗಾ ಕಾರ್ಮಿಕರು, ಎಸ್.ಹೆಚ್.ಜಿ ಸದಸ್ಯರು, ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಮಿಕರು, ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಮನೆ ಕೆಲಸದವರು, ಕೃಷಿ ಕಾರ್ಮಿಕರು, ಮೀನುಗಾರರು ಸೇರಿದಂತ ಮತ್ತಿತರ ಅಸಂಘಟಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವುದರೊಂದಿಗೆ ಇದರ ಸದುಪಯೋಗ ಪಡೆಬಹುದಾಗಿದೆ ಎಂದರು.

ಚಂದಾದಾರರು 10 ವರ್ಷದ ಒಳಗೆ ಯೋಜನೆಯಿಂದ ನಿರ್ಗಮಿಸಿದ್ದಲ್ಲಿ ಅವರು ಪಾವತಿಸಿದ ವಂತಿಕೆಯನ್ನು ಮಾತ್ರ ಆ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುತ್ತದೆ. 10 ವರ್ಷಕ್ಕಿಂತ ಹೆಚ್ಚು ಅವಧಿಯ ನಂತರ ನಿರ್ಗಮಿಸಿದ್ದಲ್ಲಿ ಅವರು ಪಾವತಿಸಿದ ವಂತಿಕೆಯೊಂದಿಗೆ ಪಿಂಚಣಿ ಖಾತೆಗೆ ಜಮೆಯಾಗಿರುವ ಬಡ್ಡಿ ಅಥವಾ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿ ಇವುಗಳಲ್ಲಿ ಯಾವ ಮೊತ್ತವು ಹೆಚ್ಚಿರುತ್ತದೋ ಅದನ್ನು ಪಾವತಿಸಲಾಗುವುದು ಎಂದರು. ಫಲಾನುಭವಿಯು ನಿರಂತರವಾಗಿ ವಂತಿಕೆಯನ್ನು ಪಾವತಿಸುತ್ತಿದ್ದು, 60 ವರ್ಷದ ಒಳಗಾಗಿ ಮೃತರಾದರೆ ಅಥವಾ ಶಾಶ್ವತ ಅಂಗ ನ್ಯೂನ್ಯತೆಯಿಂದ ವಂತಿಕೆಯನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಫಲಾನುಭವಿಯ ಸಂಗಾತಿಯು ಯೋಜನೆಯಡಿ ಸೇರಲು ಅವಕಾಶವಿದ್ದು, ವಂತಿಕೆಯನ್ನು ಪಾವತಿಸಿ ಯೋಜನೆಯಡಿ ಮುಂದುವರೆಯಬಹುದು ಅಥವಾ ಅವರ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಬಹುದಾಗಿದೆ ಎಂದ ಅವರು, ಅಸಂಘಟಿತ ಕಾರ್ಮಿಕರುಗಳಿಗೆ ಈ ಎರಡೂ ಯೋಜನೆಗಳ ಕುರಿತು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಶು ಸಖಿಯರು,

ಕೃಷಿ ಸಖಿಯರು ಸೇರಿದಂತೆ ಮತ್ತಿತರರು ಅರಿವು ಮೂಡಿಸಿ ಯೋಜನೆಯ ಫಲಾನುಭವಿಗಳನ್ನಾಗಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ವಿವಿಧ ಜಿಲ್ಲಾ ಮಟ್ಟದ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಭಾರತೀಯ ನೌಕಾಪಡೆಗೆ ಯುದ್ಧ ನೌಕೆ ‘ಮಾಲ್ವಾನ್’ ಸೇರ್ಪಡೆ

ಕೊಚ್ಚಿ, ಏ.1: ಕೊಚ್ಚಿಯಲ್ಲಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ ಎರಡನೇ ಜಲಾಂತರ್ಗಾಮಿ...

ಮಾಜಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಬಿಜೆಪಿಗೆ ಸೇರ್ಪಡೆ

ನವದೆಹಲಿ, ಮಾ.31: ಮಾಜಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಮಂಗಳವಾರ ನವದೆಹಲಿಯ...

ನನ್ನಮ್ಮ

ನನ್ನಮ್ಮನ ಕುರಿತು ಬರೆಯಲು ಪದಗಳೇ ಸಾಲದು... ನನ್ನಮ್ಮ ಅಂತ ಅಲ್ಲ, ಅಮ್ಮ...

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜೊತೆ ರಕ್ಷಣಾ ಸಚಿವಾಲಯ ರೂ.1950 ಕೋಟಿ ಒಪ್ಪಂದಕ್ಕೆ ಸಹಿ

ನವದೆಹಲಿ, ಮಾ.31: ಭಾರತೀಯ ವಾಯುಪಡೆಗೆ ಎರಡು ಪರ್ವತ ರಾಡಾರ್‌ಗಳ ಖರೀದಿಗಾಗಿ ರಕ್ಷಣಾ...
error: Content is protected !!