ಗಂಗೊಳ್ಳಿ, ಜ.18: ಸ್ವಾಮಿ ವಿವೇಕಾನಂದರ ಜೀವನವನ್ನು ಅವಲೋಕಿಸುವ ಮೂಲಕ ನಾವು ನಮ್ಮ ವ್ಯಕ್ತಿತ್ವವನ್ನು ಮೌಲ್ಯಯುತವಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ. ಇಂದಿನ ಯುವ ಜನಾಂಗಕ್ಕೆ ವಿವೇಕಾನಂದರ ತತ್ವಗಳು ಬಹಳ ದೊಡ್ಡ ಪ್ರೇರಣೆ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಸುಜಾತ ದೇವಾಡಿಗ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಇಲ್ಲಿನ ಎಸ್.ವಿ ಕಾಮರ್ಸ್ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಆಶಯ ನುಡಿಗಳನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷರಾದ ಯಶವಂತ ಗಂಗೊಳ್ಳಿ ಮಾತನಾಡಿ, ಸದಾ ಕಾಲ ಸದ್ವಿಚಾರಗಳನ್ನು ಧ್ಯಾನಿಸುತ್ತಾ ಉತ್ತಮ ಕೆಲಸಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ಜೀವನ ಸುಂದರವಾಗುತ್ತದೆ ಮತ್ತು ನಿಜವಾದ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಅಭಿಜ್ಞಾ ಖಾರ್ವಿ, ಕೀರ್ತನಾ ಪೂಜಾರಿ ಮತ್ತು ಪ್ರಾರ್ಥನಾ ಪೈ ವಿವೇಕ ವಿಚಾರಗಳನ್ನು ಪ್ರಸ್ತುತಪಡಿಸಿದರು. ಕಾಲೇಜಿನ ಸ್ವಚ್ಛತಾ ಸಿಬ್ಬಂದಿ ಆಶಾ ಖಾರ್ವಿ ಅವರನ್ನು ಗೌರವಿಸಲಾಯಿತು.
ಕನ್ನಡ ಉಪನ್ಯಾಸಕ ಹೆಚ್ ಸುಜಯೀಂದ್ರ ಹಂದೆ ಮತ್ತು ಸ. ವಿ.ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಶೇರುಗಾರ್ ಉಪಸ್ಥಿತರಿದ್ದರು. ಎಸ್ ವಿ ಕಾಮರ್ಸ್ ಕ್ಲಬ್ ಸಂಯೋಜಕರಾದ ನರೇಂದ್ರ ಎಸ್ ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಜಯಶ್ರೀ ಸ್ವಾಗತಿಸಿದರು. ಅದಿತಿ ಎಸ್ ಖಾರ್ವಿ ಪ್ರಾರ್ಥಿಸಿ ಶಿವಾನಿ ಕಾರ್ಯಕ್ರಮ ನಿರೂಪಿಸಿದರು.




By
ForthFocus™