ಉಡುಪಿ, ಜ.18: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಹಾಗೂ National Pension Scheme for the Traders and self Employed Persons (NPS-Traders) ಯೋಜನೆಗಳಡಿ ಅಸಂಘಟಿತ ವಲಯದ ಕಾರ್ಮಿಕರು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳನ್ನು ನೋಂದಾಯಿಸಲು ಜನವರಿ 15 ರಿಂದ ಮಾರ್ಚ್ 15 ರ ವರೆಗೆ “ವಿಶೇಷ ನೋಂದಣಿ ಅಭಿಯಾನ” ವನ್ನು ಹಮ್ಮಿಕೊಳ್ಳಲಾಗಿದ್ದು, 18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಈ ಯೋಜನೆಯಡಿ ನೋಂದಾಯಿಸಬಹುದಾಗಿದೆ.
ವಯಸ್ಸಿಗೆ ಅನುಗುಣವಾಗಿ ಮಾಸಿಕವಾಗಿ 55 ರೂ.ನಿಂದ 200 ರೂ.ವರೆಗೆ ವಂತಿಕೆ ಪಾವತಿ ಮಾಡಬೇಕು. ಕೇಂದ್ರ ಸರ್ಕಾರದ ವತಿಯಿಂದ ಅಷ್ಟೇ ವಂತಿಕೆ ಪಾವತಿಸಿ ಬ್ಯಾಂಕ್ ಖಾತೆಯಲ್ಲಿ ಸದರಿ ಮೊತ್ತವನ್ನು ಸಂಗ್ರಹಿಸಲಾಗುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಮಾಸಿಕ ರೂ.3000 ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಸದರಿ ಯೋಜನೆಯಡಿ ನರೇಗಾ ಕಾರ್ಮಿಕರು, ಎಸ್.ಹೆಚ್.ಜಿ ಸದಸ್ಯರು, ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಮಿಕರು, ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಮೀನುಗಾರರು, ಇನ್ನಿತರೆ ಅಸಂಘಟಿತ ವಲಯಗಳ ಕಾರ್ಮಿಕರು ಹಾಗೂ ವ್ಯಾಪಾರಿಗಳು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮೊದಲ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಯಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರಜತಾದ್ರಿಯ ಕಾರ್ಮಿಕ ಅಧಿಕಾರಿಗಳ ಕಛೇರಿ ಅಥವಾ ತಾಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಉಡುಪಿ ಉಪವಿಭಾಗದ ಕಾರ್ಮಿಕ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.




By
ForthFocus™