Friday, January 16, 2026
Friday, January 16, 2026

ಹೆಬ್ರಿ: ಆರ್ಡಿ ಪ್ರದೇಶದಲ್ಲಿರುವ ವೀರಗಲ್ಲಿನ ಅಧ್ಯಯನ

ಹೆಬ್ರಿ: ಆರ್ಡಿ ಪ್ರದೇಶದಲ್ಲಿರುವ ವೀರಗಲ್ಲಿನ ಅಧ್ಯಯನ

Date:

ಹೆಬ್ರಿ, ಜ.15: ತಾಲೂಕಿನ ಬೆಳ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರ್ಡಿ ಪ್ರದೇಶದಲ್ಲಿನ ಬರ್ಕಲ್ ಹಾಡಿ (ಬರೆದ ಕಲ್ಲು)ಯಲ್ಲಿರುವ ಸ್ಮಾರಕ ಶಿಲೆಯ ಅಧ್ಯಯನವನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ-ಉಡುಪಿ ಇದರ‌ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಇವರ‌ ಮಾರ್ಗದರ್ಶನದಲ್ಲಿ, ಪೂರ್ಣಪ್ರಜ್ಞಾ ಕಾಲೇಜು-ಉಡುಪಿ ಇಲ್ಲಿನ ಇತಿಹಾಸ ವಿಭಾಗದ ಉಪನ್ಯಾಸಕರಾದ ಮಹೇಶ್ ಶೆಟ್ಟಿ ಆರ್ಡಿ ಅವರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ‌.

ಗ್ರಾನೈಟ್ ಶಿಲೆಯಲ್ಲಿ‌ ನಿರ್ಮಾಣ ಮಾಡಿರುವ ಈ ಸ್ಮಾರಕಶಿಲೆಯು 14-15ನೇ ಶತಮಾನಕ್ಕೆ ಸೇರಿರುವ ವೀರಗಲ್ಲಾಗಿದ್ದು, 5 ಪಟ್ಟಿಕೆಗಳನ್ನು ಹೊಂದಿರುತ್ತದೆ. ಸುಮಾರು 4.5 ಅಡಿ‌ ಎತ್ತರ ಹಾಗೂ 2 ಅಡಿ ಅಗಲವನ್ನು ಹೊಂದಿರುವ ಈ ವೀರಗಲ್ಲಿನ ಪ್ರಥಮ / ಕೆಳಗಿನ ಪಟ್ಟಿಕೆಯಲ್ಲಿ ಕತ್ತಿ-ಗುರಾಣಿಯನ್ನು‌‌‌ ಹಿಡಿದು ಯುದ್ಧಕ್ಕೆ ಸನ್ನದ್ಧರಾಗಿರುವ ವೀರರ ಸೈನ್ಯವನ್ನು ತೋರಿಸಲಾಗಿದೆ. ಎರಡನೆಯ ಪಟ್ಟಿಕೆಯಲ್ಲಿ ವೀರನು ತನ್ನ ಕೈಯಲ್ಲಿ ಕತ್ತಿಯನ್ನು ಹಿಡಿದು ಎದುರಾಳಿ ಸೈನಿಕನೊಂದಿಗೆ ವೀರಾವೇಶದಿಂದ ಹೋರಾಟ ಮಾಡುವ ಸಂದರ್ಭದಲ್ಲಿ ಅಶ್ವಾರೋಹಿ ಸೈನಿಕನೊಬ್ಬ ಈ ವೀರನಿಗೆ ತಿಳಿಯದಂತೆ ಯುದ್ಧತಂತ್ರದ ಮೂಲಕ ಹಿಂಬದಿಯಿಂದ ಬಂದು ಕತ್ತಿಯಲ್ಲಿ ಇರಿಯುವಂತೆ ತೋರಿಸಲಾಗಿದೆ.‌ ಮೂರನೇ ಪಟ್ಟಿಕೆಯಲ್ಲಿ ಇದೇ ವೀರನಿಗೆ ಇಬ್ಬರು ಅಶ್ವಾರೋಹಿ ಸೈನಿಕರು ಕತ್ತಿಯಿಂದ ಇರಿಯುವಂತೆ ತೋರಿಸಲಾಗಿದೆ.

ಒಂದು ಆಯಾಮದ ಪ್ರಕಾರ ಈ ಎರಡು ಮತ್ತು ಮೂರನೇ ಪಟ್ಟಿಕೆಗಳನ್ನು ಗಮನಿಸಿದಾಗ, ರಾಜ / ರಾಜ್ಯಕ್ಕಾಗಿ ರಣರಂಗದಲ್ಲಿ ಹೋರಾಡುವ ವೀರನನ್ನು ಎದುರಾಳಿಯ ಅಶ್ವಾರೋಹಿ ಸೈನಿಕರು ಕತ್ತಿಯಿಂದ ಇರಿದು ಕೊಂದಿರುವಂತೆ ಕಾಣುತ್ತದೆ‌.

ನಾಲ್ಕನೆಯ ಪಟ್ಟಿಕೆಯಲ್ಲಿ ರಾಜ /ರಾಜ್ಯಕ್ಕಾಗಿ ತನ್ನ ಪ್ರಾಣವನ್ನು ಬಲಿದಾನ‌ ಮಾಡಿದ ವೀರನನ್ನು ದೇವಕನ್ನಿಕೆಯರು / ಅಪ್ಸರೆಯರು ಅಶ್ವದಳದೊಂದಿಗೆ ಇಹಲೋಕದಿಂದ ಪರಲೋಕಕ್ಕೆ ಕರೆದೊಯ್ಯುವ ಕೆತ್ತನೆಯನ್ನು ಮಾಡಲಾಗಿದೆ. ಕೊನೆಯ ಪಟ್ಟಿಕೆಯಲ್ಲಿ ಯುದ್ಧದಲ್ಲಿ ವೀರ ಮರಣ ಹೊಂದಿದ ವೀರನು, ಕೈಲಾಸದಲ್ಲಿ ದೀಪಾಲಂಕಾರದಲ್ಲಿ ಕಂಗೋಳಿಸುತ್ತಿರುವ ಲಿಂಗರೂಪಿ ಪರಶಿವನನ್ನು ಕೈಮುಗಿದು ಭಕ್ತಿಯಿಂದ ನಮಸ್ಕರಿಸುವಂತೆ ತೋರಿಸಲಾಗಿದೆ.

ಒಟ್ಟಾರೆ ಈ ವೀರಗಲ್ಲು‌ 14-15ನೇ ಶತಮಾನದಲ್ಲಿ ರಾಜನ ಪರವಾಗಿ ರಾಜ್ಯವನ್ನು ರಕ್ಷಿಸುವ ಸಂದರ್ಭದಲ್ಲಿ ಎದುರಾಳಿ ತಂಡದ ಸೈನಿಕರೊಂದಿಗೆ ಹೋರಾಡಿ ಪ್ರಾಣ ತ್ಯಾಗ ಮಾಡಿದ ವೀರನ ಸ್ಮರಣಾರ್ಥವಾಗಿ ನಿಲ್ಲಿಸಿರುವ ಸ್ಮಾರಕ ಶಿಲೆಯಾಗಿದ್ದು, ಪ್ರಸ್ತುತ ಇದನ್ನು ಸ್ಥಳೀಯ ಜಗಲಗುಡ್ಡೆ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರು ಸಂರಕ್ಷಿಸಿಕೊಂಡು ಬಂದಿರುವುದು ಶ್ಲಾಘನೀಯ ಕಾರ್ಯ ಎಂದು ಸಂಶೋಧನಾರ್ಥಿಯು ಸಂತೋಷ ವ್ಯಕ್ತಪಡಿಸಿರುತ್ತಾರೆ. ಮಾತ್ರವಲ್ಲದೇ ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಆಶ್ಲೇಷ್ ಆಚಾರ್ಯ ಮೂಡುಬೆಳ್ಳೆ ಸಹಕಾರ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಉಡುಪಿಗೆ ಬನ್ನಿ’ ಕ್ಯಾಲೆಂಡರ್ ಬಿಡುಗಡೆ

ಉಡುಪಿ, ಜ.16: ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ...

ಹೊಸ ಮೆರುಗಿನೊಂದಿಗೆ ಉಡುಪಿ ರೈಲು ನಿಲ್ದಾಣ ಪ್ರಯಾಣಿಕರಿಗೆ ಲಭ್ಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಜ.14: ಉಡುಪಿ ರೈಲು ನಿಲ್ದಾಣದ ಪ್ರಯಾಣಿಕರ ಬಹು ದಿನಗಳ ಬೇಡಿಕೆ...

ಶೀರೂರು ಪರ್ಯಾಯ ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ

ಉಡುಪಿ, ಜ.15: ಶೀರೂರು ಪರ್ಯಾಯದ ವಿದ್ಯುತ್ ದೀಪಾಲಂಕಾರದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಸ್ವರೂಪ...

ಸಂಜೀವಿನಿ ಮಹಿಳೆಯರ ಕ್ರೀಡಾಕೂಟ

ಉಡುಪಿ, ಜ.15: ರಾಷ್ಟ್ರಿಯ ಗ್ರಾಮೀಣ ಜೀವನೋಪಾಯ ಅಭಿಯಾನ -ಸಂಜೀವಿನಿ, ಸ್ವರ್ಣ ಸಂಜೀವಿನಿ...
error: Content is protected !!