ಉಡುಪಿ: ಕುಂದಾಪುರ ತಾಲೂಕಿನ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದ ಪ್ರಾಂಗಣದಲ್ಲಿರುವ ಅಶ್ವಥಕಟ್ಟೆಯಲ್ಲಿನ ಅಪ್ರಕಟಿತ ಶಾಸನವನ್ನು ಇಲ್ಲಿನ ಆಡಳಿತಾಧಿಕಾರಿ ಶ್ರೀರಮಣ ಉಪಾಧ್ಯಾಯ ಮತ್ತು ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಅವರ ಮಾಹಿತಿಯ ಮೇರೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್. ಎ. ಕೃಷ್ಣಯ್ಯ ಮತ್ತು ಯು. ಕಮಲಬಾಯಿ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರಾದ ಕೆ. ಶ್ರೀಧರ್ ಭಟ್ ಅವರ ನೇತೃತ್ವದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ನಡೆಸಿರುತ್ತಾರೆ.
ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನದ ಬಹುತೇಕ ಭಾಗವು ಸವೆದು ಹೋಗಿದ್ದು, ಅಸ್ಪಷ್ಟವಾಗಿ ಗೋಚರಿಸುವ ಕೆಲವು ಲಿಪಿಯ ಆಧಾರದ ಮೇಲೆ ಈ ಶಾಸನವನ್ನು ಅಧ್ಯಯನ ಮಾಡಲಾಗಿದೆ. ಶಾಸನವು ಸುಮಾರು 3 ಅಡಿ ಎತ್ತರ ಹಾಗು 2.5 ಅಡಿ ಅಗಲವನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಶಿವಲಿಂಗವಿದ್ದು ಇದರ ಇಕ್ಕೆಲಗಳಲ್ಲಿ ನಂದಿ, ರಾಜಕತ್ತಿ, ದೀಪ ಕಂಬ ಹಾಗೂ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ.
“ಶ್ರೀ ಗಣಾಧಿಪತಯೆ ನಮ” ಎಂಬ ಶ್ಲೋಕದಿಂದ ಪ್ರಾರಂಭವಾಗುವ ಈ ಶಾಸನವು ವಿಜಯನಗರ ತುಳುವ ದೊರೆ ಸದಾಶಿವರಾಯನಿಗೆ ಸೇರಿದ್ದು, ಕಾಲಮಾನವು ಶಕವರುಷ 1467 ನೆಯ ವಿಶ್ವಾವಸು ಸಂವತ್ಸರದ ಚೈತ್ರ ಶುದ್ದ 10 ಆದಿತ್ಯವಾರ ಎಂದಿದೆ. ಅಂದರೆ ಈ ಕಾಲಮಾನವು ಕ್ರಿ. ಶ 1545ಕ್ಕೆ ಸರಿ ಹೊಂದುತ್ತದೆ.
ಈ ಕಾಲದಲ್ಲಿ ಬಾರಕೂರು ರಾಜ್ಯವನ್ನು ಆಚಪ್ಪ ಒಡೆಯರು ಆಳ್ವಿಕೆ ಮಾಡುತ್ತಿದ್ದ. ಉಳಿದಂತೆ ಶಾಸನದಲ್ಲಿ ತುಳು ರಾಜ್ಯ, ಶಿವಾಲಯ, ಸೋಮನಾಥೇಶ್ವರ, ಶತ್ರುಕ್ಷಯ, ಗ ೮ನು ಎಂಬ ಪದಗಳ ಉಲ್ಲೇಖವಿದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯಗಳು ಅಸ್ಪಷ್ಟವಾಗಿ ಕಂಡುಬರುತ್ತದೆ. ಶಾಸನವನ್ನು ಅಧ್ಯಯನ ನಡೆಸಿರುವ ಸಂಶೋಧನಾರ್ಥಿಯು ರಾಜನ ಆಯುರಾರೋಗ್ಯಕ್ಕಾಗಿ ದಾನವನ್ನು ಕೊಟ್ಟಿರುವ ಶಾಸನ ಇದಾಗಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.