ಉಡುಪಿ, ಅ.29: ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥಾ ಕೇಂದ್ರದಿಂದ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭಗೊಳ್ಳಲಿರುವ ಭಗವದ್ಗೀತಾ ಡಿಪ್ಲೊಮಾ ಕೋರ್ಸ್ ನ್ನು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಒಂದು ವರ್ಷ ಅವಧಿಯ ಒಟ್ಟು ಐದು ಪತ್ರಿಕೆಗಳನ್ನು ಒಳಗೊಂಡ ಈ ಡಿಪ್ಲೊಮಾ ಕೋರ್ಸ್ ನ ಪಾಠದ ವ್ಯವಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆನ್ಲೈನ್ ಮೂಲಕ ನಡೆಯಲಿದೆ. ಪರೀಕ್ಷೆಗಳೂ ಆನ್ಲೈನ್ ಮೂಲಕ ನಡೆಯಲಿದೆ. ಶ್ರೀ ಪುತ್ತಿಗೆ ಮಠದ ಮಾರ್ಗದರ್ಶನದಲ್ಲಿ ನಡೆಯುವ ಈ ಕೋರ್ಸ್ ನ ಪಠ್ಯಪುಸ್ತಕವಾಗಿ ಶ್ರೀ ಪುತ್ತಿಗೆ ಮಠದ ವತಿಯಿಂದ ಬಿಡುಗಡೆಗೊಂಡ ಗೀತಾಮೃತಸಾರ ಪುಸ್ತಕವನ್ನು ಸ್ವೀಕರಿಸಲಾಗಿದೆ. ಈ ಭಗವದ್ಗೀತಾ ಡಿಪ್ಲೊಮಾ ಕೋರ್ಸ್ ಅತ್ಯಂತ ಯಶಸ್ವಿಯಾಗಲಿ ಎಂದು ಪೂಜ್ಯ ಶ್ರೀಪಾದರು ಹಾರೈಸಿದರು.
ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ ಎಸ್ ಮೂಡಿತ್ತಾಯರು ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಭಾರತೀಯ ಶಿಕ್ಷಣ ವ್ಯವಸ್ಥೆ ಮತ್ತು ಭಗವದ್ಗೀತಾ ಡಿಪ್ಲೊಮಾ ಕೋರ್ಸ್ ಗಳ ಆವಶ್ಯಕತೆ ಹಾಗೂ ಹಿನ್ನೆಲೆಯನ್ನು ವಿವರಿಸಿದರು.
ವೇದಿಕೆಯಲ್ಲಿ ಖ್ಯಾತ ಪುರಾತತ್ವ ಶಾಸ್ತ್ರಜ್ಞರಾದ ಪದ್ಮಶ್ರೀ ಕೆ ಕೆ ಮೊಹಮ್ಮದ್ ಹಾಗೂ ಟೆಂಪ್ಲೆಕ್ಸ್ ಸಿಟಿ ಖ್ಯಾತ ಬರಹಗಾರ ಸುರೇಂದ್ರನಾಥ್ ಬೋಪ್ಪರಾಜು ಮತ್ತು ಹಿರಿಯ ಸಂಶೋಧಕ ವಿದ್ವಾಂಸರಾದ ಪ್ರೊ ಶ್ರೀಪತಿ ತಂತ್ರಿ ಉಡುಪಿ ಉಪಸ್ಥಿತರಿದ್ದರು. ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥಾ ಕೇಂದ್ರದ ನಿರ್ದೇಶಕರಾದ ಡಾ. ಸುಧೀರ್ ರಾಜ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ದ ಸಂಚಾಲಕರಾದ ಪ್ರಸನ್ನ ಆಚಾರ್ಯರ ಸಂಘಟನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಡಾ. ಬಿ. ಗೋಪಾಲಾಚಾರ್ಯ ನಿರ್ವಹಿಸಿದರು. ಭಗವದ್ಗೀತಾ ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕಾಗಿ ನಿಟ್ಟೆ ವಿಶ್ವವಿದ್ಯಾಲಯದ ಐ.ಕೆ.ಎಸ್.ಕೇಂದ್ರದ ನಿರ್ದೇಶಕರಾದ ಡಾ ಸುಧೀರ್ ರಾಜ್ ಕೆ ( 99459 12075) ಸಂಪರ್ಕಿಸಬಹುದು.




By
ForthFocus™