ಉಡುಪಿ, ಆ.20: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿದ್ದ ಅಕ್ಕ ಕೆಫೆ ಇಂದಿನಿಂದ ಪ್ರಾರಂಭವಾಗಿದ್ದು ಸಂಜೀವಿನಿ ಮಹಿಳೆಯರು ತಯಾರಿಸಿದ “ಒಲವಿನ ಊಟ” ಸಿದ್ದವಾಗಿದೆ. ‘ಅಕ್ಕ ಕೆಫೆ’ ಯೋಜನೆಯನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಅನುಷ್ಠಾನಕ್ಕೆ ತಂದಿದೆ. ‘ಅಕ್ಕ ಕೆಫೆ’ಗಳು ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡುವುದರ ಜೊತೆಗೆ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಉಪಾಹಾರ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಪ್ರಸ್ತುತ ಕಲ್ಯಾಣಪುರ ಗ್ರಾಮ ಪಂಚಾಯತ್ ನ ಬ್ರಹ್ಮಶ್ರೀ ಸಂಜೀವಿನಿ ಒಕ್ಕೂಟ ಮಹಿಳೆಯರು ಈ ಅಕ್ಕ ಕೆಫೆಯನ್ನು ನಿರ್ವಹಿಸಲಿದ್ದಾರೆ. ಈಗಾಗಲೇ ಕ್ಯಾಟರಿಂಗ್ ಉದ್ಯಮದಲ್ಲಿ ಅನುಭವ ಹೊಂದಿರುವ ಇವರು ಸಸ್ಯಾಹಾರ ಮತ್ತು ಮಾಂಸಾಹಾರ ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದಾರೆ. ಕುಟುಂಬ ಶ್ರೀ ಕೇರಳ ತಂಡದಿಂದ ಅಕ್ಕ ಕಫೆ ನಿರ್ಹಹಣೆ ಬಗ್ಗೆ ತರಬೇತಿ ಪಡೆದಿದ್ದಾರೆ. ಈ ಅಕ್ಕ ಕೆಫೆಯನ್ನು ಸಂಪೂರ್ಣ ಸಂಜೀವಿನಿ ಮಹಿಳೆಯರೇ ನಿರ್ವಹಿಸುವುದು ವಿಷೇಶವಾಗಿದೆ. ಆಹಾರ ತಯಾರಿಸುವುದು, ಬಡಿಸುದು, ಸ್ವಚ್ಛಗೊಳಿಸುವುದು ಎಲ್ಲಾ ಮಹಿಳೆಯರೇ ನಿರ್ವಹಿಸಲಿದ್ದಾರೆ.
ಅಕ್ಕ ಕೆಫೆಯಲ್ಲಿ ಬೆಳಿಗ್ಗೆ ಟೀ, ಕಾಫಿ ಜೊತೆ ರುಚಿಕರವಾದ ತಿಂಡಿಗಳು, ಮದ್ಯಾಹ್ನ ಸಸ್ಯಾಹಾರ ಹಾಗೂ ಮಾಂಸಾಹಾರ ಊಟ ಎರಡು ಲಭ್ಯವಿದೆ. ವಿವಿಧ ಬಗೆಯ ತಂಪು ಪಾನೀಯಗಳು ಮತ್ತು ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸುವ ವಿವಿಧ ಬಗೆಯ ಉತ್ಪನ್ನಗಳಾದ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಹನಿ, ಸಾಂಬಾರ್ ಪೌಡರ್, ಚಾಕೊಲೇಟ್, ರೊಟ್ಟಿ, ಚಿಕ್ಕಿ ಇತ್ಯಾದಿ ಲಭ್ಯವಿದೆ. ಗುಣಮಟ್ಟದ ಶುಚಿ ರುಚಿಯಾದ ಪೌಷ್ಟಿಕ ಆಹಾರ ಕೈಗೆಟಕುವ ದರದಲ್ಲಿ ನೀಡುವುದು ಈ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರ ಉದ್ದೇಶವಾಗಿದೆ.




By
ForthFocus™