ಜಾತ್ರೆಗಳು ಗ್ರಾಮೀಣ ಜೀವನದ ಅವಿಭಾಜ್ಯ ಅಂಗ. ವಿಭಕ್ತ ಕುಟುಂಬಗಳು ಜಾಸ್ತಿ ಆಗುತ್ತಿವೆ ಎಂಬ ಈ ಕಾಲಘಟ್ಟದಲ್ಲಿ ಜಾತ್ರೆ ಒಂದು ದೊಡ್ಡ ಕೂಡು ಕುಟುಂಬದ ಸಂಕೇತದಂತೆ ಭಾಸವಾಗುತ್ತದೆ.
ಜಾತ್ರೆ ಮನುಜನ ಬದುಕಿನ ರೂಪಕ ಸಹ ಹೌದು ಎನಿಸುತ್ತದೆ. ಮಗುವಾಗಿದ್ದಾಗ ಜಾತ್ರೆಗೆ ಬರುವ ಸಂಭ್ರಮವೇ ಬೇರೆ ಆಗ ಆಟಿಕೆ, ಗೊಂಬೆಗಳತ್ತ ಗಮನ ನಂತರ ಯುವ ವಯಸ್ಸಿನಲ್ಲಿ ಜಾತ್ರೆಯನ್ನು ಪರಿಭಾವಿಸುವ ಪರಿ ಬೇರೆ ಅಲ್ಲಿ ಹುಡುಗಾಟದ ತಿರುಗಾಟ. ನವ ವಿವಾಹಿತರಿಗೆ ಜಾತ್ರೆ ತೆರೆದುಕೊಳ್ಳುವ ಬಗೆ ಭಿನ್ನ. ಸಂಗಾತಿಯ ಕೈಹಿಡಿದುಕೊಂಡು ಜಾತ್ರೆ ಸುತ್ತುವ ರೋಮಾಂಚನ ಮರೆಯದ ಅನುಭವ ಉಂಟು ಮಾಡಬಹುದು, ಬಳಿಕ ಪಾಲಕರಾಗಿ ಜಾತ್ರೆಗೆ ಬರುವಾಗಿನ ಕಾಳಜಿಯೇ ಬೇರೆ ಅಲ್ಲಿ ಪಡೆಯುವುದಕ್ಕಿಂತ ಕೊಡಿಸುವತ್ತ, ಕುಟುಂಬ ಸದಸ್ಯರ ಸುರಕ್ಷತೆಯತ್ತ ಹೆಚ್ಚು ಗಮನ. ವಯಸ್ಸಾದಾಗ ಜಾತ್ರೆಯ ಸ್ವರೂಪ ಗ್ರಹಿಸುವ ಬಗೆ ಭಿನ್ನ.ಇದೇ ಕಾಲಚಕ್ರ, ಜೀವನಚಕ್ರ. ಜಾತ್ರೆಯ ತೊಟ್ಟಿಲು ಒಂದು ಸುತ್ತು ತಿರುಗಿ ಮತ್ತೊಂದು ಸುತ್ತಿಗೆ ಅಣಿಯಾಗುವ ಹಾಗೆ. ತೊಟ್ಟಿಲಿನಲ್ಲಿ ಕೂರುವ ಪಾತ್ರಗಳು ಬದಲಾಗುತ್ತವೆ ಆದರೆ ತೊಟ್ಟಿಲು ತಿರುಗುತ್ತ ಇರುತ್ತದೆ. ಜಾತ್ರೆಗೆ ಬರುವ ಮನುಷ್ಯರು ಬದಲಾಗುತ್ತ ಇರಬಹುದು ಇದೇ ನಿಸರ್ಗ ನಿಯಮ.
ಕರಾವಳಿ ಪ್ರದೇಶವು ಅಗಾಧವಾದ ನೈಸರ್ಗಿಕ ಸೌಂದರ್ಯವನ್ನು ಮಾತ್ರವಲ್ಲದೆ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇಲ್ಲಿ ನೆಡೆಯುವ ಜಾತ್ರೆಗಳು ತುಂಬಾ ವಿಭಿನ್ನವಾಗಿದೆ. ಇಲ್ಲಿನ ಜಾತ್ರೆಗಳಲ್ಲಿ ನೆಡೆಯುವ ದೈವದ ಆರಾಧನೆ ಬದುಕಿನ ಅರ್ಥ ತಿಳಿಸುತ್ತದೆ ಹಾಗೂ ಈ ಪ್ರದೇಶದ ಶ್ರೀಮಂತ ಸಂಸ್ಕೃತಿ,ನೃತ್ಯ, ಸಂಗೀತ ಮತ್ತು ಪ್ರಕೃತಿಯ ಪ್ರತೀಕ ಸೂಚಿಸುತ್ತದೆ.
ಈ ಆರ್ಥಿಕ ವರ್ಷದಲ್ಲಿ (2024-25)ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ವಸ್ತು ಪ್ರದರ್ಶನದ ಮೂಲಕ ಬಹು ದೊಡ್ಡ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗಿದೆ. ಉಡುಪಿಯ ಕ್ರಷ್ಣ ಮಠದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ, ಬೈಂದೂರು ಉತ್ಸವದಲ್ಲಿ, ಉಡುಪಿ ರಥಬೀದಿಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ, ಹೆಬ್ರಿಯ ಹೇಬ್ಬೆರಿ ಉತ್ಸವದಲ್ಲಿ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ ಹಾಗೂ ತಾಲೂಕು ಹಂತದಲ್ಲೂ ಮಾರಾಟ ಮೇಳವನ್ನು ಆಯೋಜನೆ ಮಾಡಲಾಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಲ್ಲಿ ನೆಡೆದ ಸರಸ್ ಮೇಳದಲ್ಲೂ ಸಹ ಜಿಲ್ಲೆಯ ಸಂಜೀವಿನಿ ಮಹಿಳೆಯರು ಭಾಗವಹಿಸಿ ತಾವು ತಯಾರಿಸಿದ ಉತ್ಪನ್ನವನ್ನು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಪರಿಚಯಿಸಿದ್ದಾರೆ.
ಗ್ರಾಹಕರಾಗಿ ಸಂಜೀವಿನಿ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ನಾವು ನಮ್ಮ ಬೆಂಬಲವನ್ನು ಒದಗಿಸಲು ಪೆರ್ಡೂರು ಅನಂತ ಪದ್ಮನಾಭ ಜಾತ್ರಾ ಮಹೋತ್ಸವ ಅಂಗವಾಗಿ ಸಂಜೀವಿನಿ ಗುಂಪಿನ ಮಹಿಳೆಯರು ತಯಾರಿಸಲ್ಪಟ್ಟ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲು ನಿರ್ಧರಿಸಲಾಯಿತು.
ಶ್ರೀ ಅನಂತ ಪದ್ಮನಾಭ ಕ್ಷೇತ್ರವು ಉಡುಪಿ ಜಿಲ್ಲೆಯ ಪೆರ್ಡೂರ್ ಗ್ರಾಮದ ಪ್ರಾಚೀನ ದೇವಾಲಯ. ಈ ದೇವಾಲಯಕ್ಕೆ 800 ವರ್ಷಗಳ ಇತಿಹಾಸ ವಿದೆ ಇಲ್ಲಿನ ಜಾತ್ರೆ ವಿಜೃಂಭಣೆಯಾಗಿದ್ದು ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದ ಸಾಕಷ್ಟು ಸಂಖ್ಯೆಯ ಭಕ್ತಭಿಮಾನಿಗಳು ಹಾಗೂ ಸಾರ್ವಜನಿಕರು ಆಗಮಿಸುತ್ತಾರೆ ಆದ್ದರಿಂದ ಇಲ್ಲಿ ವಸ್ತು ಪ್ರದರ್ಶನ ಆಯೋಜಿಸುವುದು ಸೂಕ್ತ ಎಂದು ತೀರ್ಮಾನಿಸಲಾಯಿತು. ದಿನಾಂಕ 15.03.2025 ರಂದು ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೇತನಾ ಶೆಟ್ಟಿ ವಸ್ತು ಪ್ರದರ್ಶನವನ್ನು ಉದ್ಘಾಟಿಸುವ ಮೂಲಕ ಜಾಲನೆ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮನಾ, ಸ್ವರ್ಣ ಸಂಜೀವಿನಿ ತಾಲೂಕು ಒಕ್ಕೂಟದ ಅಧ್ಯೇಕ್ಷರಾದ ಲತಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನವ್ಯ, ಜಿಲ್ಲಾ ತಾಲೂಕು ಹಾಗೂ ತಾಲೂಕು ಎನ್.ಆರ್.ಎಲ್.ಎಮ್ ಘಟಕದ ಸಿಬ್ಬಂದಿಯವರು ಮತ್ತು ಪದ್ಮ ಕಮಲಸಂಜೀವಿನಿ ಒಕ್ಕೂಟ ದ ಸದಸ್ಯರು ಉಪಸ್ಥಿತರಿದ್ದರು.
ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಶ್ರೀನಿವಾಸ್ ರಾವ್, ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಜಯ, ಹೆಬ್ರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ. ಜಿ ಈ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ ವಸ್ತುಗಳನ್ನು ಖರೀದಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಜಿಲ್ಲೆಯ 25 ಮಹಿಳಾ ಉದ್ಯಮಿದಾರರು ತಾವೇ ತಯಾರಿಸಿದ ವಿವಿಧ ಬಗೆಯ ಊದುಬತ್ತಿ, ಸೋಪುಗಳು, ಕಲಶ ಕನ್ನಡಿ, ಗೃಹಪ್ರವೇಶ ಪರಿಕರ, ಹಳದಿ ಕಾರ್ಯಕ್ರಮ ಸಾಮಗ್ರಿ, ದೇವರ ಹರಿವಾಣ, ತೋರಣಗಳು, ವಿವಿಧ ಚಿತ್ತಾರಗಳ ಪೈಟಿಂಗ್, ಸೀರೆ, ಕುಂಬಾರಿಕೆ ವಸ್ತುಗಳು, ಕೃತಕ ಆಭರಣ, ಹ್ಯಾಂಡ್ ಮೇಡ್ ಬ್ಯಾಗ್, ತೆಂಗಿನ ಚಿಪ್ಪಿನ ವಿವಿಧ ಕಲಾಕೃತಿಗಳು, ಅಲಂಕಾರಿಕ ಹೂವಿನ ಗಿಡಗಳು, ಗೊಂಬೆಗಳು, ಬಿದಿರಿನ ಬುಟ್ಟಿ, ಗೋಲಿ ಸೋಡಾ, ಪಾಸ್ಟ್ ಫುಡ್, ಚನ್ನ ಪಟ್ಟಣದ ಗೊಂಬೆಗಳು ಇತ್ಯಾದಿ ವಸ್ತುಗಳು ಗಮನ ಸೆಳೆದವು.ಸಾರ್ವಜನಿಕ ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮೇಳಕ್ಕೆ ಆಗಮಿಸಿ ಉತ್ಪನ್ನಗಳನ್ನು ಖರೀದಿಸಿದರು. ಎಲ್ಲಾ ಉತ್ಪನ್ನಗಳು ಮಾರಾಟವಾಗಿ ಮಹಿಳಾ ಉದ್ಯಮಿದಾರರು ಅಧಿಕ ಲಾಭ ಗಳಿಸಿದರು.




By
ForthFocus™