Home ಸುದ್ಧಿಗಳು ಪ್ರಾದೇಶಿಕ ಮೋಹನ್ ಶೆಣೈ ಎರ್ಮಾಳ್ ದಂಪತಿಗಳಿಂದ ಮಾಹೆ ಟ್ರಸ್ಟ್‌ಗೆ ದೇಣಿಗೆ

ಮೋಹನ್ ಶೆಣೈ ಎರ್ಮಾಳ್ ದಂಪತಿಗಳಿಂದ ಮಾಹೆ ಟ್ರಸ್ಟ್‌ಗೆ ದೇಣಿಗೆ

431
0

ಮಣಿಪಾಲ: ಪ್ರಮುಖ ದಾನಿ ದಂಪತಿಗಳಾದ ಮೋಹನ್ ಶೆಣೈ ಎರ್ಮಾಳ್ ಮತ್ತು ಅರುಣಾ ಎಂ ಶೆಣೈ ಅವರು ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳವನ್ನು ಮೇಲ್ದರ್ಜೆಗೇರಿಸಲು ಮಣಿಪಾಲದ ಮಾಹೆ ಟ್ರಸ್ಟ್‌ಗೆ 10 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದರು.

ದೇಣಿಗೆ ಚೆಕ್ ಅನ್ನು ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್.ಬಲ್ಲಾಳ್ ಮತ್ತು ಉಪ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ರವರಿಗೆ ಹಸ್ತಾಂತರಿಸಿದರು.

ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳಿಗೆ ದಂಪತಿಗಳು ದೇಣಿಗೆ ನೀಡುತ್ತಿರುವುದು ಇದು ಎರಡನೇ ಬಾರಿ. ಈ ಸಂದರ್ಭದಲ್ಲಿ ಡಾ. ಎಚ್.ಎಸ್.ಬಲ್ಲಾಳ್ ಸಂತಸ ವ್ಯಕ್ತಪಡಿಸಿ, ಈ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನಷ್ಟು ಜನರು ಉದಾರ ದೇಣಿಗೆಯೊಂದಿಗೆ ಮುಂದೆ ಬಂದು ಮಾಹೆ ಮಣಿಪಾಲದ ಸಮಾಜಮುಖಿ ಚಟುವಟಿಕೆಗಳಿಗೆ ಕೈ ಜೋಡಿಸಬೇಕು ಎಂದು ಅವರು ಆಶಿಸಿದರು.

ಲೆಫ್ಟಿನೆಂಟ್ ಜನರಲ್ ಡಾ. ಎಂ ಡಿ ವೆಂಕಟೇಶ್ ಅವರು, ಈ ದೇಣಿಗೆ ಮೊತ್ತಕ್ಕೆ ಸಮಾನ ಮೊತ್ತವನ್ನು  ಮಾಹೆ ಮಣಿಪಾಲದಿಂದ  ನೀಡಲಾಗುವುದು ಮತ್ತು ಒಟ್ಟು ಮೊತ್ತವನ್ನು ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಸೇವೆಗಳನ್ನು ಸುಧಾರಿಸಲು ಬಳಸಲಾಗುವುದು ಎಂದು ಘೋಷಿಸಿದರು.

ಆಸ್ಪತ್ರೆಯಲ್ಲಿನ ಶಸ್ತ್ರಚಿಕಿತ್ಸಾ ಕೊಠಡಿ ಸಂಕೀರ್ಣ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.

ಮಾಹೆ ಮಣಿಪಾಲದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ಎಚ್ ವಿನೋದ್ ಭಟ್ ಉಪಸ್ಥಿತರಿದ್ದು, 1987 ರಲ್ಲಿ ಪ್ರಾರಂಭವಾದಾಗಿನಿಂದ ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಮೋಹನ್ ಮತ್ತು ಅರುಣಾ ಶೆಣೈ ಅವರಂತಹ ಹಲವಾರು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಹೆ  ಕುಲಸಚಿವ ನಾರಾಯಣ್ ಸಭಾಹಿತ್, ತುಕಾರಾಮ ನಾಯಕ್, ಸುವರ್ಣ ನಾಯಕ್ ಮತ್ತು ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.