ಮಣಿಪಾಲ, ಜು.28: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ), ಕರ್ನಾಟಕ – ಕೇರಳ ಇವರ ವತಿಯಿಂದ ಕೊರಗ ಸಮುದಾಯದ ಜನರ ಉದ್ಯೋಗ ಭರವಸೆ ಈಡೇರಿಕೆ ಹಾಗೂ ಕೃಷಿ ಭೂಮಿ ಹಕ್ಕು ಪತ್ರ ಮಂಜೂರಾತಿ ಮಾಡುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಸಮುದಾಯದ ಬೇಡಿಕೆಗಳ ಬಗ್ಗೆ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯಶ್ಪಾಲ್ ಸುವರ್ಣ, ಕೊರಗ ಸಮುದಾಯದ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು, ಬೇಡಿಕೆಗಳ ಈಡೇರಿಕೆ ಶಾಸಕನಾಗಿ ನನ್ನ ಕರ್ತವ್ಯವಾಗಿದ್ದು, ಈ ಬಗ್ಗೆ ಪ್ರಾಮಾಣಿಕ ಪ್ರಯತ್ನದ ಭರವಸೆ ನೀಡಿದರು.
ಈಗಾಗಲೇ ಕೊರಗ ಸಮುದಾಯದ ಪ್ರತಿಭಟನೆಯ ಬಗ್ಗೆ ಸ್ಪೀಕರ್ ಯು. ಟಿ. ಖಾದರ್ ರವರ ಮೂಲಕ ಸರಕಾರದ ಗಮನಕ್ಕೆ ತಂದಿದ್ದು, ಮೊನ್ನೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಮುಂದಾಗಿದ್ದರೂ, ಕಲಾಪವನ್ನು ಗುರುವಾರ ಮೊಟಕುಗೊಳಿಸಿದ ಪರಿಣಾಮ ಸದನದಲ್ಲಿ ಚರ್ಚಿಸಲು ಸಾಧ್ಯವಾಗಿಲ್ಲ. ಸೋಮವಾರ ಸಮುದಾಯದ ಪ್ರಮುಖರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿ, ಅತೀ ಶೀಘ್ರದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಎಲ್ಲಾ ಶಾಸಕರು ಜೊತೆಗೂಡಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುವುದಾಗಿ ತಿಳಿಸಿದರು.