Home ಸುದ್ಧಿಗಳು ಪ್ರಾದೇಶಿಕ ರೆಡ್‌ಕ್ರಾಸ್ ಸಂಸ್ಥೆಯ ಮಾನವೀಯ ಸೇವೆ ಶ್ಲಾಘನೀಯ: ನ್ಯಾ. ಶರ್ಮಿಳಾ ಎಸ್

ರೆಡ್‌ಕ್ರಾಸ್ ಸಂಸ್ಥೆಯ ಮಾನವೀಯ ಸೇವೆ ಶ್ಲಾಘನೀಯ: ನ್ಯಾ. ಶರ್ಮಿಳಾ ಎಸ್

119
0

ಉಡುಪಿ, ಮೇ 8: ರೆಡ್‌ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರುಗಳು ಯುದ್ಧ, ನೆರೆ ಮತ್ತು ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ಮಾನವೀಯತೆಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರೆಡ್‌ಕ್ರಾಸ್ ಸಂಸ್ಥೆಯು ನ್ಯಾಯಯುತವಾಗಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಾ ಬಂದಿದ್ದೂ, ಇದು ನಿಜಕ್ಕೂ ಶ್ಲಾಘನೀಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಹೇಳಿದರು. ಅವರು ಬುಧವಾರ ನಗರದ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಇವರ ವತಿಯಿಂದ ನಡೆದ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನಸಾಮಾನ್ಯರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಹಾಗೂ ಸಮಾಜದ ಒಳಿತಿಗಾಗಿ ಕೆಲಸ ನಿರ್ವಹಿಸುವ ಜನರಿಗೆ ಗೌರವಿಸುವುದು ಈ ದಿನದ ವಿಶೇಷ. ಯಾವುದೇ ಫಲಾಪೇಕ್ಷೆಯಿಲ್ಲದೆ ಪ್ರಪಂಚದಾದ್ಯಂತ ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಸ್ವಯಂಸೇವಕರಿಗೆ ರೆಡ್‌ಕ್ರಾಸ್ ದಿನಾಚರಣೆ ಆಚರಿಸುವ ಮೂಲಕ ಧನ್ಯವಾದ ಅರ್ಪಿಸೋಣ ಎಂದರು.

ಪ್ರತಿಯೊಬ್ಬರ ಜೀವನದಲ್ಲಿಯೂ ಕಾನೂನು ಮಹತ್ತರ ಪಾತ್ರ ವಹಿಸುತ್ತದೆ. ಹುಟ್ಟಿನಿಂದ ಸಾಯುವವರೆಗೂ ಕಾನೂನು ನಮ್ಮ ಸುತ್ತಲೂ ಸುತ್ತುತ್ತಿರುತ್ತದೆ. ಗೊತ್ತು ಗೊತ್ತಿಲ್ಲದಂತೆ ಪ್ರತಿನಿತ್ಯ ನಾವು ಕಾನೂನಿನ ಅಡಿಯಲ್ಲಿ ಜೀವಿಸುತ್ತಿದ್ದೇವೆ. ಜನಸಾಮಾನ್ಯರು ಕ್ಷುಲ್ಲಕ ಕಾರಣಕ್ಕೆ ನ್ಯಾಯಾಲಯಕ್ಕೆ ತೆರಳುವಂತಾಗಬಾರದು. ಅವರುಗಳಿಗೆ ಕಾನೂನಿನ ಕುರಿತು ಹೆಚ್ಚು ಅರಿವು ಮೂಡಿಸಬೇಕು. ಲೋಕ ಅದಾಲತ್‌ನಲ್ಲಿಯೂ ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದ ಅವರು, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿಯೂ ಕಾನೂನು ಸೇವಾ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ಪ್ರಪಂಚದಲ್ಲಿಯೇ ಮಾನವೀಯತೆಯ ನೆಲೆಯಲ್ಲಿ ಸೇವೆ ಮಾಡುವ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಜಗತ್ತಿನ ಸುಮಾರು 192 ದೇಶಗಳಲ್ಲಿ ಪಸರಿಸಿದ್ದು, 4 ಬಾರಿ ನೊಬೆಲ್ ಪ್ರಶಸ್ತಿ ಪಡೆದ ಸಂಸ್ಥೆಯಾಗಿದೆ. ಮನುಕುಲದ ಸೇವೆಗೆ ಸದಾ ಸನ್ನದ್ಧರಾಗಿರುವ ಸ್ವಾಸ್ಥö್ಯ ಸೇನಾನಿಗಳಿಗೆ ಈ ದಿನಾಚರಣೆಯ ಮೂಲಕ ಗೌರವ ಅರ್ಪಿಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಸಮಾಜಕ್ಕೆ ಹಾಗೂ ಸಂಸ್ಕೃತಿಗೆ ಸೇವೆ ಸಲ್ಲಿಸಿದ ಜಿಲ್ಲೆಯ ಸಾಧಕರಾದ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್, ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ವೈದ್ಯೆ ಡಾ. ಗಿರಿಜ ಮತ್ತು ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ರೆಡ್‌ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯ ವಿ. ಜಿ. ಶೆಟ್ಟಿ, ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ರೆಡ್‌ಕ್ರಾಸ್ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು, ಡಿ.ಡಿ.ಆರ್.ಸಿ ಸಿಬ್ಬಂದಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಗೌರವ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ನಿರೂಪಿಸಿದರೆ, ಖಚಾಂಚಿ ರಮಾದೇವಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.