ಕೋಟ, ಮೇ 5: ಯಾವುದೇ ಭಾಷೆಯ ಬಗ್ಗೆ ಮುಜುಗರ ಒಳ್ಳೆಯದಲ್ಲ. ನಮ್ಮ ಭಾಷೆ, ನಮ್ಮ ನೆಲ, ನಮ್ಮ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಅಂಬಲಪಾಡಿ ಕ್ಷೇತ್ರದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ ಹೇಳಿದರು. ಕೋಟ ಕಾರಂತ ಥೀಂ ಪಾರ್ಕ್ನಲ್ಲಿ ಭಾನುವಾರ ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟತಟ್ಟು ಗ್ರಾಮ ಪಂಚಾಯತ್, ಉಸಿರು ಕೋಟ, ಬ್ರಹ್ಮಾವರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕುಂದಾಪ್ರ ಕನ್ನಡ ಪರಿಷತ್ತು ಮತ್ತು ಮಂಗಳೂರಿನ ಪುಟ್ಟಣ ಕುಲಾಲ್ ಪ್ರತಿಷ್ಟಾನದ ಸಂಯುಕ್ತ ಆಶ್ರಯದಲ್ಲಿ ನಡೆದ ಕುಂದಾಪ್ರ ಕನ್ನಡ ನಾಲ್ಕನೆಯ ಸಾಹಿತ್ಯ ಸಮ್ಮೇಳನ ಕಾಂಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕುಂದಾಪ್ರ ಭಾಷೆಯಲ್ಲಿ ಗಟ್ಟಿತನವಿದ್ದು, ಸರಳತೆಯಿದೆ. ಇದು ಜನತೆಯ ಬದುಕಾಗಿದೆ. ಡಾ.ಶಿವರಾಮ ಕಾರಂತರು, ಗೋಪಾಲಕೃಷ್ಣ ಅಡಿಗ, ವೈದೇಹಿ ಅಂತಹ ಸಾಹಿತಿಗಳು ಕುಂದಾಪ್ರ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಇದನ್ನು ಬೆಳೆಸುವ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು. ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಕುಂದಾಪುರದ ಸಾಹಿತ್ಯಿಕ ಚಿಂತಕ ಎ.ಎಸ್.ಎನ್ ಹೆಬ್ಬಾರ್ ಮಾತನಾಡಿ ಪ್ರಪಂಚದಲ್ಲಿ 7 ಸಾವಿರಕ್ಕೂ ಅಧಿಕ ಭಾಷೆ ಇದ್ದಿದ್ದು, ಇದರಲ್ಲಿ ಸುಮಾರು 4 ಸಾವಿರ ಭಾಷೆಗಳು ಮಾತನಾಡುವವರು ಇಲ್ಲದೇ ನಶಿಸಿ ಹೋಗಿದೆ. ಭಾಷೆಗೂ ಭೂಮಿಗೂ ನಂಟಿದ್ದು, ವಸಾಹತುಶಾಹಿಗಳ ಮತ್ತು ಆಕ್ರಮಣಕಾರರಿಂದ ನಮ್ಮ ಭಾಷೆಗಳು ಅಳಿವಿನಂಚಿಗೆ ಸಾಗುತ್ತಿದೆ. ಕುಂದಕನ್ನಡಕ್ಕೂ ಇದೇ ಅಪಾಯವಿದ್ದು, ಹೆತ್ತವರು ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಮಾತನಾಡಿಸುವುದರಿಂದ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬಹುದು ಕುಂದಾಪ್ರ ಭಾಷೆ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ ಅದರ ಬಗ್ಗೆ ತಾತ್ಸಾರ ಸಲ್ಲ ಬದಲಾಗಿ ಮನೆ ಮನೆಗಳ್ಲಿ ಭಾಷೆಯ ಉಳಿವಿಗೆ ಪ್ರಯತ್ನ ತಂದೆ ತಾಯಂದಿರರಿಂದ ಆಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಕುಂದಾಪ್ರ ಕನ್ನಡದಲ್ಲಿ ಚಲನಚಿತ್ರವಾಗಬೇಕು, ಅಧ್ಯಯನ ಪೀಠಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಕರ್ನಾಟಕದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡುವವರ ಸಂಖ್ಯೆ ಹೆಚ್ಚಿದ್ದು, ಇದರಿಂದ ಸ್ಥಳೀಯ ಭಾಷೆಗಳು ಉಳಿದುಕೊಂಡಿವೆ. ಯಕ್ಷಗಾನ, ಕಲೆ ಸಂಸ್ಕೃತಿ, ಸಾಹಿತ್ಯದ ಜ್ಞಾನವನ್ನು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ತಿಳಿಸುವತ್ತ ಪೋಷಕರು ಗಮನ ನೀಡಬೇಕು ಎಂದರು. ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ವೈದ್ಯ ಅವರಿಗೆ ಕೋಟ ವೈಕುಂಠ ಯಕ್ಷ ಸಂಘಟಕ ಪುರಸ್ಕಾರ, ಕಿರಣ ಗರಡಿಮಜಲು ಅವರಿಗೆ ಮಂಜುನಾಥ ಕೋಟ ರಂಗಭೂಮಿ ಪುರಸ್ಕಾರ, ಪ್ರಸಾದ ಕಾಂಚನ್ ಅವರಿಗೆ ಕೆ.ಸಿ.ಕುಂದರ್ ಯುವ ಉದ್ಯಮಿ ಪುರಸ್ಕಾರ ಮತ್ತು ಶ್ಯಾಮಸುಂದರ ಶೆಟ್ಟಿ ಅವರಿಗೆ ಕೆ.ಸಿ.ಕುಂದರ್ ಸಾಂಪ್ರದಾಯಿಕ ಉದ್ಯಮ ಪುರಸ್ಕಾರ ನೀಡಿ ಗೌರವಿಸಲಾಯಿತು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಬ್ರಹ್ಮಾವರ ತಾಲ್ಲೂಕು ಅಧ್ಯಕ್ಷ ರಾಮಚಂದ್ರ ಐತಾಳ, ಕೋಟ ಕಾರಂತ ಪ್ರತಿಷ್ಟಾನದ ಟ್ರಸ್ಟಿ ಸುಬ್ರಾಯ ಆಚಾರ್, ಬ್ರಹ್ಮಾವರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಅಚ್ಲಾಡಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ ಕುಂದರ್, ಮತ್ತಿತರರು ಇದ್ದರು. ಡಾ.ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಅಧ್ಯಾಪಕ ಸತೀಶ ವಂದಿಸಿದರು. ಮಾನಸ ಕಾರ್ಯಕ್ರಮ ನಿರೂಪಿಸಿದರು. ಕುಂದಕನ್ನಡ ಚಿಂತಕ ಡಾ.ಅಣ್ಣಯ್ಯ ಕುಲಾಲ ಸ್ಮರಣಿಕೆ ನೀಡಿದರು. ಕುಂದಾಪ್ರ ಕನ್ನಡದಲ್ಲಿ ಬಹುವಿಧ ಗೋಷ್ಟಿ, ಕುಂದಕನ್ನಡ ಹರಟೆ ಗುಣ ಮೇಲೋ, ಹಣ ಮೇಲೋ ಕಾರ್ಯಕ್ರಮಗಳು ನಡೆದವು.