ಕೋಟ: ಸಾಲಿಗ್ರಾಮ ಸರ್ವಿಸ್ ರಸ್ತೆ ನಿರ್ಮಾಣ ವಿಳಂಬದ ವಿರುದ್ಧ ಹೆದ್ದಾರಿ ಜಾಗೃತಿ ಸಮಿತಿ ಮತ್ತೊಮ್ಮೆ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿದೆ. ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಆಗಾಗ ಧ್ವನಿ ಎತ್ತುತ್ತಿರುವ ಹೆದ್ದಾರಿ ಜಾಗೃತಿ ಸಮಿತಿ 2019ರಲ್ಲಿ ಸಾಲಿಗ್ರಾಮ ಸೇರಿದಂತೆ ಇನ್ನುಳಿದ ಭಾಗಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಬೃಹತ್ ಪಾದಯಾತ್ರೆ ಮೂಲಕ ಎಚ್ಚರಿಕೆಯ ಕರೆಗಂಟೆ ನೀಡಿದ ಬಳಿಕ 2020ರಲ್ಲಿ ಸಾಲಿಗ್ರಾಮ ಪರಿಸರದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲು ಅಣಿಯಾಯಿತು.
ಆದರೆ ಒಂದೂವರೆ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಲು ನವಯುಗ ಕಂಪನಿ ವಿಫಲವಾಗಿದೆ. ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯತ್ ಹಾಗೂ ಹೆದ್ದಾರಿ ಜಾಗೃತಿ ಸಮಿತಿ ಎಚ್ಚರಿಕೆಯ ಹೊರತಾಗಿಯೂ ರಸ್ತೆ ಕಾಮಗಾರಿಯ ಬಗ್ಗೆ ನಿರ್ಲಕ್ಷ್ಯ ತೋರಿದೆ. ಈ ಕುರಿತು ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ ನೇತೃತ್ವದಲ್ಲಿ ಫೆ.4 ರಂದು ಶುಕ್ರವಾರ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಸಾಲಿಗ್ರಾಮ ಬಸ್ ನಿಲ್ದಾಣದ ಬಳಿ ಸಭೆ ಸೇರಲಿದೆ.ಶ್
ಸರ್ವಿಸ್ ರಸ್ತೆಗಳಿಲ್ಲದೆ ಅವಘಡಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇನ್ನೊಂದೆಡೆ ಅವೈಜ್ಞಾನಿಕ ಕಾಮಗಾರಿಯಲ್ಲೇ ನವಯುಗ ಕಂಪನಿ ಕಾಲಹರಣ ಮಾಡುತ್ತಿದೆ ಎಂದು ಹೇಳಿರುವ ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ ಸಂಘಟಕ ಪ್ರತಾಪ್ ಶೆಟ್ಟಿ ಸಾಸ್ತಾನ, ಈ ಕುರಿತು ಮತ್ತೊಂದು ಸುತ್ತಿನ ಹೋರಾಟದ ಕಾವು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.