ಉಡುಪಿ, ನ.6: ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹ- 2023 ಇದರ ಅಂಗವಾಗಿ ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಸೋಮವಾರ ವಿದ್ಯಾರ್ಥಿಗಳಿಗಾಗಿ ಕನ್ನಡ ಪುಸ್ತಕ ಓದಿ ಗ್ರಹಣ ಶಕ್ತಿ ಬೆಳೆಸುವ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಅಜ್ಜರಕಾಡಿನ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಸಾಹಿತಿ ಗಿರಿಜಾ ಹೆಗಡೆ ಗಾಂವ್ಕರ್ ಮತ್ತು ಹಿರಿಯ ಸಾಹಿತಿ ಸಂಗೀತಾ ಜಾನ್ಸನ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಗಿರಿಜಾ ಹೆಗಡೆ ಗಾಂವ್ಕರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಓದು ಎಂಬುದು ಪ್ರೇರಕ ಶಕ್ತಿ. ಪಠ್ಯ ಪಠ್ಯೇತರ ಪುಸ್ತಕಗಳನ್ನು ಓದುವುದನ್ನು ರೂಡಿಸಿಕೊಂಡಾಗ ಸಾಹಿತ್ಯದ ರುಚಿ ಬೆಳೆಯುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವುದನ್ನು ಕರಗತ ಮಾಡಿಕೊಳ್ಳಿ ಎಂದು ಹಿತನುಡಿಗಳನ್ನಾಡಿದರು.
ಸಂಗೀತಾ ಜಾನ್ಸನ್ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಓದುವುದನ್ನು ಹವ್ಯಾಸವನ್ನಾಗಿಸಿಕೊಳ್ಳಬೇಕು. ಅದು ಮನಸ್ಸನ್ನು ಉಲ್ಲಾಸಗೊಳಿಸುವುದರ ಜೊತೆ ಜ್ಞಾನವನ್ನು ಹೆಚ್ಚಿಸುತ್ತದೆ. ಓದುವ ಕಲೆಯನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳುವಂತೆ ತಿಳಿಸಿದ ಅವರು, ಗ್ರಂಥಾಲಯವು ಓದುವ ಸ್ಪರ್ಧೆಗಳನ್ನು ಏರ್ಪಡಿಸಿ ಓದುವ ಕಲೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಪಾಲಕರಾದ ಸಿ. ರಂಜಿತ ನಿರೂಪಿಸಿದರು, ಪ್ರಥಮ ದರ್ಜೆ ಸಹಾಯಕಿ ಶಕುಂತಳ ಕುಂದರ್ ವಂದಿಸಿದರು.