Home ಸುದ್ಧಿಗಳು ಪ್ರಾದೇಶಿಕ ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ

ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ

253
0

ಉಡುಪಿ, ಮಾ.30: ಕೆಲವರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗವು ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ಮಚ್ಚೀಂದ್ರ ಅವರಿಗೆ ಮನವಿ ಸಲ್ಲಿಸಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಅಧೀನ ಸಂಸ್ಥೆಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುಮಾರು 170 ಮಂದಿ ಸದಸ್ಯರು ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಿ ಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಜಿಲ್ಲೆಯಲ್ಲಿ ಕೆಲವು ವ್ಯಕ್ತಿಗಳು ಪತ್ರಕರ್ತರ ಸಂಘ ಮತ್ತು ಪತ್ರಕರ್ತರ ಹೆಸರು ಹೇಳಿ ಹಣ ಸಂಗ್ರಹಿಸುವ, ವಸೂಲಿ ಮಾಡುವ ಹಾಗೂ ಬೆದರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವುದು ಸಂಘದ ಗಮನಕ್ಕೆ ಬಂದಿದೆ.

ಯಾವುದೇ ಪತ್ರಿಕೆ ಹಾಗೂ ಟಿವಿಯಲ್ಲಿ ಸುದ್ದಿ ಪ್ರಕಟಿಸಲು ಅಥವಾ ಪ್ರಸಾರ ಮಾಡಲು ಹಣ ನೀಡಬೇಕಾದ ಅಗತ್ಯ ಇರುವುದಿಲ್ಲ. ಆದರೂ ಕೆಲವು ನಕಲಿ ಪತ್ರಕರ್ತರು ಸುದ್ದಿಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿರುವ ಬಗ್ಗೆ ಸಂಘಕ್ಕೆ ದೂರುಗಳು ಬಂದಿವೆ. ಈ ರೀತಿ ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿಗೆ ಇಳಿಯುವ ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅದೇ ರೀತಿ ಪ್ರಸ್ತುತ ಚುನಾವಣೆ ಪ್ರಯುಕ್ತ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ಕಾರ್ಯದಲ್ಲಿ ತೊಡಗಿದ್ದು, ಈ ಹಿನ್ನೆಲೆಯಲ್ಲಿ ಕೆಲವು ವ್ಯಕಿತಿಗಳು ತಮ್ಮ ವಾಹನಗಳಿಗೆ ಮಿಡಿಯಾ, ಪ್ರೆಸ್ ಸ್ಟಿಕ್ಕರ್ ಹಾಕಿಕೊಂಡು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಸಂಘಕ್ಕೆ ದೂರುಗಳು ಬಂದಿವೆ. ಈ ರೀತಿಯ ವಾಹನಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ತಪಾಸಣೆ ಮಾಡಬೇಕು ಮತ್ತು ಅದರಲ್ಲಿ ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದರೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

‘ನಮ್ಮ ಸಂಘದಿಂದ ನಮ್ಮ ಸದಸ್ಯರುಗಳಿಗೆ ಗುರುತಿನ ಚೀಟಿ ಮತ್ತು ವಾಹನ ಗಳಿಗೆ ಅಧಿಕೃತ ಮಿಡಿಯಾ ಸ್ಟಿಕ್ಕರನ್ನು ನೀಡಲಾಗಿದೆ. ಪತ್ರಕರ್ತರ ಹೆಸರಿನಲ್ಲಿ ಯಾರೇ ಹಣ ವಸೂಲಿಗೆ ಬಂದರೆ ಅಂತಹವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಿಗೆ ದೂರು ನೀಡಬೇಕು ಮತ್ತು ನಮ್ಮ ಸಂಘದ ಗಮನಕ್ಕೂ ತರಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ತಿಳಿಸಿದ್ದಾರೆ.

ನಿಯೋಗದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಜತೆ ಕಾರ್ಯದರ್ಶಿಗಳಾದ ರಹೀಂ ಉಜಿರೆ, ಪ್ರಮೋದ್ ಸುವರ್ಣ, ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಪುಂಡಲೀಕ ಮರಾಠೆ, ಜಿಲ್ಲಾ ಸಮಿತಿ ಸದಸ್ಯರಾದ ಮೈಕಲ್ ರೋಡಿಗ್ರಸ್, ಹರೀಶ್ ಬಲಾಯಿಪಾದೆ, ಸಂಘದ ಸದಸ್ಯರಾದ ಶಶಿಧರ ಮಾಸ್ತಿಬೈಲು, ದೀಪಕ್ ಜೈನ್, ದಿನೇಶ್ ಎಂ.ಎಚ್., ಚೇತನ್ ಮಟಪಾಡಿ, ಅಶ್ವತ್ ಆಚಾರ್ಯ, ಜಸ್ಟಿನ್ ಡಿಸಿಲ್ವ, ಗೋಪಾಲಕೃಷ್ಣ ಪಾದೂರು, ರಕ್ಷಿತ್ ಬೆಳಪು, ನಾಗರಾಜ ರಾವ್, ಬಾಲಚಂದ್ರ ಎಚ್. ಮೊದಲಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.