ಉಡುಪಿ: ಪೂರ್ಣಪ್ರಜ್ಞ ವಿಜ್ಞಾನ ಸಂಶೋಧನಾ ಸಂಸ್ಥೆ (ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ರಿಸರ್ಚ್) ಬೆಂಗಳೂರು ಮತ್ತು ಪೂರ್ಣಪ್ರಜ್ಞ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ‘ಸ್ಕೋಪ್ ಆಫ್ ರಿಸರ್ಚ್ ಇನ್ ಬೇಸಿಕ್ ಸೈನ್ಸ್’ Apprentice with scientist ಎಂಬ ರಾಜ್ಯಮಟ್ಟದ ಮೂರು ದಿನಗಳ ಕಾರ್ಯಾಗಾರವನ್ನು ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕ ಹಾಗೂ ವಿಜ್ಞಾನ ಸಂಘ ಇವರ ಸಹಯೋಗದಲ್ಲಿ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ. ಎಸ್. ಶೇರಿಗಾರ ಉದ್ಘಾಟನೆ ನೆರವೇರಿಸಿದರು. ವಿಜ್ಞಾನದ ಇತಿಹಾಸ ಮತ್ತು ಅದರ ಬೆಳವಣಿಗೆಯ ಕಾಲಘಟ್ಟದ ಬಗ್ಗೆ ಅವರು ವಿಸ್ತ್ರತವಾಗಿ ಮಾತನಾಡಿ, ಮೂಲವಿಜ್ಞಾನದ ಆಶಯ ಮತ್ತು ಅಗತ್ಯತೆಯನ್ನು ವಿವರಿಸಿದರು.
ಪ್ರೊ. ಆನಂದ ಅವರು ಕಾರ್ಯಗಾರದ ವಿಶೇಷತೆ ಮತ್ತು ಔಚಿತ್ಯದ ಕುರಿತು ಮಾತನಾಡಿದರು. ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ರಿಸರ್ಚ್ ನ ವಿಜ್ಞಾನಿ ಪ್ರೊ. ಗಣಪತಿ ವಿ. ಶಾನಭಾಗ ಅವರು ಸಂಶೋಧನೆಯ ಮಹತ್ವ ಮತ್ತು ಸರ್ಕಾರದ ಧನಸಹಾಯ ಮತ್ತು ಸರ್ಕಾರ ಕೊಡಮಾಡುವ ಸಂಶೋಧನಾ ಶಿಷ್ಯವೇತನದ ಬಗ್ಗೆ ಮಾಹಿತಿ ನೀಡಿದರು.
ಪೂರ್ಣಪ್ರಜ್ಞ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಪ್ರಕಾಶ ರಾವ್ ಅಧ್ಯಕ್ಷತೆ ವಹಿಸಿದ್ದರು. ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಸುದರ್ಶನ ಶೆಟ್ಟಿ ಸ್ವಾಗತಿಸಿ, ಗಣಿತಶಾಸ್ತ್ರದ ಮುಖ್ಯಸ್ಥರಾದ ರಾಕೇಶ್ ವಂದಿಸಿದರು. ರಸಾಯನಶಾಸ್ತ್ರ ಪ್ರಾಧ್ಯಾಪಕಿ ಸುಪರ್ಣಾ ಕಾರ್ಯಕ್ರಮ ನಿರೂಪಿಸಿದರು.