ಉಡುಪಿ, ಮಾ.1: ರಾಜ್ಯದಲ್ಲಿರುವ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳಿಂದ ವಿದ್ಯಾನಿಧಿ ಯೋಜನೆಯಡಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಸೌಲಭ್ಯ ಪಡೆಯಲು ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ https://sevasindhu.karnataka.gov.in/Sevasindhu/kannada ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳ ಆಧಾರ್ ಜೋಡಿತ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಪದ್ಧತಿ ಮೂಲಕ ಪಾವತಿಸಲಾಗುವುದು. ರಾಜ್ಯದ ಯಾವುದೇ ಪ್ರಾದೇಶಿಕ ಅಥವಾ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮೋಟಾರು ಕ್ಯಾಬ್ ವರ್ಗಗಳ ಸಾರಿಗೆ ವಾಹನಗಳನ್ನು ಚಲಾಯಿಸಲು ಸಾರಥಿ ತಂತ್ರಾಂಶದಲ್ಲಿ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾಪತ್ರ ಹೊಂದಿರುವ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.