Home ಸುದ್ಧಿಗಳು ಪ್ರಾದೇಶಿಕ ಜ್ಞಾನಸುಧಾ ಸಂಸ್ಥಾಪಕರ ದಿನಾಚರಣೆ- ಸಾಧಕರಿಗೆ ಸನ್ಮಾನ

ಜ್ಞಾನಸುಧಾ ಸಂಸ್ಥಾಪಕರ ದಿನಾಚರಣೆ- ಸಾಧಕರಿಗೆ ಸನ್ಮಾನ

ರಾಷ್ಟ್ರದ ರಕ್ಷಣಾ ನಿಧಿಗೆ ಎರಡು ಲಕ್ಷದ ಹದಿನಾಲ್ಕು ಸಾವಿರ ರೂಪಾಯಿ ಅರ್ಪಣೆ

252
0

ಗಣಿತನಗರ: ಬುದ್ದಿವಂತಿಕೆ ನೈತಿಕತೆಯ ಬಳ್ಳಿಯಾಗಿದೆ. ಎಲ್ಲಿಯವರೆಗೆ ನೈತಿಕತೆಯಿಂದ ಕೂಡಿದ ಬುದ್ದಿವಂತಿಕೆ ಇರುವುದಿಲ್ಲವೋ ಅಲ್ಲಿಯ ತನಕ ನಾವು ಯಾರಿಗೂ ಪ್ರಯೋಜನವಾಗುವುದಿಲ್ಲ. ಹೆಣವಾಗುವ ಮುನ್ನ ಇತರರ ಬಾಳಿಗೆ ನಾವೆಷ್ಟು ಹಣತೆಯನ್ನು ಹಚ್ಚಿದ್ದೇವೆ ಅನ್ನೋದು ಮುಖ್ಯವೇ ವಿನಃ ನಮ್ಮ ಪದವಿ, ಅಂತಸ್ತು ಅಲ್ಲ ಎಂದು ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡೀನ್ ಡಾ. ಕೃಷ್ಣ ಪ್ರಸಾದ್ ಎಂ.ಎಸ್. ಹೇಳಿದರು.

ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದ ಗಣಿತನಗರ ಕ್ರೀಡಾಂಗಣದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜ್ಞಾನಸುಧಾ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಜೀವನದಲ್ಲಿ ಎತ್ತರಕ್ಕೇರಬೇಕೆಂಬ ಕನಸಿದ್ದರೆ ಮೌಲ್ಯಯುತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ತಂದೆ-ತಾಯಿ ಬಯಸುತ್ತಿರುವುದನ್ನು ಈಡೇರಿಸಲು ಹಂಬಲ ಇರಬೇಕು. ವೈದ್ಯಕೀಯ ರಂಗ ಇಂದು ಹಣದ ಹಿಂದೆ ಹೋಗಿರುವುದು ವಿಷಾದನೀಯ ಸಂಗತಿ. ಮಾನವರಲ್ಲಿ ಮಾನವೀಯತೆ ಇರದಿದ್ದರೆ ಜೀವನಕ್ಕೆ ಅರ್ಥವಿಲ್ಲ. ಕೃತಜ್ಞತೆಯ ಮನೋಭಾವ ಮುಖ್ಯ. ಸಾಧಕ ವಿದ್ಯಾರ್ಥಿಗಳ ಬೆನ್ನೆಲುಬಾಗಿ ನಿಂತ ಜ್ಞಾನಸುಧಾ ಪರಿವಾರದ ಕಾರ್ಯವು ಶ್ಲಾಘನೀಯ ಎಂದು ಅಭಿನಂದಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಾಹೆ ಮಣಿಪಾಲದ ನಿರ್ವಹಣಾ, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಉಪಕುಲಪತಿಯಾಗಿರುವ ಡಾ. ಮಧುವೀರರಾಘವನ್ ಮಾತನಾಡಿ, ಕೌಶಲ್ಯತೆ, ಬದ್ಧತೆ, ಕಾರ್ಯಕ್ಷಮತೆ ಪ್ರಾಮಾಣಿಕತೆಯಿಂದ ಕೂಡಿದ ದುಡಿಮೆಯಿದ್ದರೆ ಜೀವನದಲ್ಲಿ ಸಿಗುವ ಅವಕಾಶಗಳಿಗೆ ದಾರಿಯನ್ನು ಒದಗಿಸುತ್ತದೆ. ಹೆತ್ತವರು ತಮ್ಮ ಮಕ್ಕಳ ಆಸಕ್ತಿಗೆ ಪ್ರೋತ್ಸಾಹಿಸಬೇಕು. ತಮ್ಮ ಆಸಕ್ತಿಯನ್ನು ಹೇರಬಾರದು ಎಂದು ಕಿವಿಮಾತು ನೀಡಿದರು.

ಇನ್ನೋರ್ವ ಅತಿಥಿಯಾಗಿದ್ದ ಸಿಂಗಾಪುರದ ಟಿ.ಎಂ.ಟಿ ಹಾಗೂ ಇಂಟರ್ನ್ಯಾಶನಲ್ ಬ್ಯಾಂಕಿಂಗ್ ಗ್ರೂಪ್ ಡಿ.ಬಿ.ಎಸ್. ಬ್ಯಾಂಕ್ ಲಿಮಿಟೆಡ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಸೂರಜ್ ಶೆಟ್ಟಿ ಮಾತನಾಡಿ, ಬದುಕಿಲ್ಲಿ ಅಡ್ಡದಾರಿ ಹಿಡಿಯದೆ, ಹಸಿವು ಇದ್ದು, ಸಕಾರಾತ್ಮಕ ಮನೋಭಾವ, ಪ್ರಾಮಾಣಿಕತೆಯಿಂದ ಕೂಡಿದ ಕಠಿಣ ದುಡಿಮೆಯಿದ್ದರೆ ಯಾರೊಂದಿಗೂ ಸ್ಪರ್ಧಿಸುವ ಅವಶ್ಯಕತೆ ಇಲ್ಲ. ಸಾಮಾಜಿಕ ಮಾಧ್ಯಮವನ್ನು ಬಳಸುವ ಬುದ್ದಿವಂತಿಕೆ ಇದ್ದರೆ ಈ ಕಾಲದಲ್ಲಿ ಯಶಸ್ಸೆಂಬುದು ಕಟ್ಟಿಟ್ಟ ಬುತ್ತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಮಾತನಾಡುತ್ತಾ, ಅಧ್ಯಾಪಕರನ್ನು ಅರ್ಥಮಾಡಿಕೊಳ್ಳುವ ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳನ್ನು ಅರ್ಥಮಾಡಿಕೊಳ್ಳುವ ಅಧ್ಯಾಪಕರುಗಳಿಂದಲೇ ಜ್ಞಾನಸುಧಾ ಸಂಸ್ಥೆಯಲ್ಲಿ ಯಶಸ್ಸಾಗಿದೆ. ಎಷ್ಟೇ ದೊಡ್ಡ ಸಾಧನೆ ಮಾಡಿದ್ದರೂ ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವ ಹೃದಯ ಶ್ರೀಮಂತಿಕೆ ಇದ್ದರೆ ಮಾತ್ರ ಆತ ಸಾಧಕನೆನಿಸಿಕೊಳ್ಳತ್ತಾನೆ ಎಂದರು.

ಸಾಧಕರಿಗೆ ಸನ್ಮಾನ: ಜ್ಞಾನಸುಧಾ ವಿದ್ಯಾಸಂಸ್ಥೆಯಿಂದ ಎಂ.ಬಿ.ಬಿ.ಎಸ್‌ಗೆ ಆಯ್ಕೆಗೊಂಡ 109 ಮೆಡಿಕಲ್ ವಿದ್ಯಾರ್ಥಿಗಳನ್ನು, ಸಾವಿರದೊಳಗಿನ ಕೆ.ಸಿ.ಇ.ಟಿ. ಇಂಜಿನಿಯರಿಂಗ್‌ನಲ್ಲಿ ರ‍್ಯಾಂಕ್ ಪಡೆದ 9 ವಿದ್ಯಾರ್ಥಿಗಳನ್ನು, ಎನ್.ಐ.ಟಿ.ಕೆ ಸುರತ್ಕಲ್‌ನಲ್ಲಿ ಪ್ರವೇಶ ಪಡೆದ ಮೂವರು ವಿದ್ಯಾರ್ಥಿಗಳನ್ನು, ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಪಡೆದ ಇಬ್ಬರು ಕ್ರೀಡಾಪಟುಗಳನ್ನು, ರಾಷ್ಟ್ರಮಟ್ಟದಲ್ಲಿ ಸಿ.ಎ.ಫೌಂಡೇಶನ್‌ನಲ್ಲಿ ಟಾಪರ್ ಆದ ಸಾತ್ವಿಕ್ ಪ್ರಭು ಇವರುಗಳನ್ನು ಗೌರವಿಸಲಾಯಿತು.

ಈ ಶೈಕ್ಷಣಿಕ ವರ್ಷದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ 1 ಕೋಟಿ 44 ಲಕ್ಷದಷ್ಟು ವಿದ್ಯಾರ್ಥಿ ವೇತನ ನೀಡಲಾಗಿದೆ. ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ರಾಷ್ಟ್ರದ ರಕ್ಷಣಾ ನಿಧಿಗೆ ಎರಡು ಲಕ್ಷದ ಹದಿನಾಲ್ಕು ಸಾವಿರ ರೂಪಾಯಿಯನ್ನು ಸಂಸ್ಥೆಯ ಎನ್.ಸಿ.ಸಿ ಅಧಿಕಾರಿಗಳಾದ ಸುಮಿತ್.ಇ. ಹಾಗೂ ಮಂಜುನಾಥ್ ಮುದೂರ್‌ರವರಿಗೆ ಹಸ್ತಾಂತರಿಸಲಾಯಿತು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಟ್ರಸ್ಟಿ ಎಂ.ಜಿ ಗೌಡ, ವಿದ್ಯಾವತಿ ಎಸ್.ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಶಾಂತಿರಾಜ್ ಹೆಗ್ಡೆ, ಪ್ರಕಾಶ್ ಶೆಣೈ, ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯ ರೆಹಮತುಲ್ಲಾ ಉಪಸ್ಥಿತರಿದ್ದರು.

ಟ್ರಸ್ಟಿ ಅನಿಲ್ ಕುಮಾರ್ ಜೈನ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ಉಪನ್ಯಾಸಕಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.