Home ಸುದ್ಧಿಗಳು ಪ್ರಾದೇಶಿಕ ಕಲ್ಯಾಣಪುರ ಗ್ರಾಮ ಪಂಚಾಯತ್- ನಗದು ರಹಿತ ವ್ಯವಹಾರಕ್ಕೆ ಚಾಲನೆ

ಕಲ್ಯಾಣಪುರ ಗ್ರಾಮ ಪಂಚಾಯತ್- ನಗದು ರಹಿತ ವ್ಯವಹಾರಕ್ಕೆ ಚಾಲನೆ

312
0

ಉಡುಪಿ: ಸಾರ್ವಜನಿಕರು ಗ್ರಾಮ ಪಂಚಾಯತ್‌ಗಳಿಗೆ ವಿವಿಧ ತೆರಿಗೆ, ಶುಲ್ಕ ಸೇರಿದಂತೆ ಮತ್ತಿತರ ದರಗಳನ್ನು ಕಡ್ಡಾಯವಾಗಿ ಡಿಜಿಟಲ್ ವ್ಯವಸ್ಥೆಯ ಮೂಲಕ ಪಾವತಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ತಿಳಿಸಿದರು.

ಅವರು ಉಡುಪಿ ತಾಲೂಕಿನ ಕಲ್ಯಾಣಪುರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್‌ಗಳಲ್ಲಿ ನಗದು ರಹಿತ ವ್ಯವಹಾರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಜನಸಾಮಾನ್ಯರು ವಿವಿಧ ತೆರಿಗೆಗಳು, ಶುಲ್ಕಗಳು, ದರಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ನಗದು ರಹಿತವಾಗಿ ಪಾವತಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ನಗದು ರೂಪದಲ್ಲಿ ನೀಡದೇ ಡಿಜಿಟಲ್ ವ್ಯವಸ್ಥೆಗಳ ಮೂಲಕ ಪಾವತಿಸುವುದರೊಂದಿಗೆ ಸಹಕಾರ ನೀಡಬೇಕೆಂದು ತಿಳಿಸಿದರು.

ಈಗಾಗಲೇ ಗ್ರಾಮ ಪಂಚಾಯತ್‌ಗಳಿಗೆ ಇ-ಪೇ, ಫೋನ್ ಪೇ, ಪೇಟಿಎಂ, ಭೀಮ್, ರೂಪಿಯಾ ಮೊದಾಲಾದವುಗಳಲ್ಲಿ ಯಾವುದಾದರೂ ಒಂದನ್ನು ಬಳಸಿಕೊಂಡು ಡಿಜಿಟಲ್ ವ್ಯವಸ್ಥೆಯ ಮೂಲಕ ಪಾವತಿಗಳನ್ನು ಸ್ವೀಕರಿಸಲು ಸೂಚಿಸಲಾಗಿದೆ. ಅಲ್ಲದೇ ಸ್ವೈಪ್ ಯಂತ್ರಗಳನ್ನು ಸಹ ಗ್ರಾಮ ಪಂಚಾಯತ್‌ಗಳಿಗೆ ನೀಡಲಾಗಿದ್ದು, ಜನರು ಇದರ ಮೂಲಕವೂ ಪಾವತಿಸಬಹುದಾಗಿದೆ ಎಂದರು.

ಸರ್ಕಾರ ಈಗಾಗಲೇ ನಗದು ರಹಿತ ಡಿಜಿಟಲ್ ವ್ಯವಸ್ಥೆಗೆ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆ, ಗ್ರಾಮ ಪಂಚಾಯತ್‌ ಗಳಲ್ಲಿಯೂ ಕಡ್ಡಾಯವಾಗಿ ಡಿಜಿಟಲ್ ವ್ಯವಸ್ಥೆಗಳ ಮೂಲಕ ಸಾರ್ವಜನಿಕರಿಂದ ಹಣ ಸ್ವೀಕರಿಸುವುದು ಹಾಗೂ ಪಾವತಿಸುವುದಕ್ಕೆ ಮುಂದಾಗಲಾಗಿದೆ. ಇದರಿಂದ ಸಾರ್ವಜನಿಕರಿಗೂ ಹಾಗೂ ಗ್ರಾಮ ಪಂಚಾಯತಿಗಳಿಗೂ ಅನುಕೂಲವಾಗುವುದರ ಜೊತೆಗೆ ಆರ್ಥಿಕ ವ್ಯವಹಾರವು ಹೆಚ್ಚು ಪಾರದರ್ಶಕಗೊಳ್ಳುತ್ತದೆ ಎಂದರು.

ಸಾರ್ವಜನಿಕರು ಸುರಕ್ಷತೆಯೊಂದಿಗೆ ಡಿಜಿಟಲ್ ಪಾವತಿಗೆ ಹೆಚ್ಚು ಒತ್ತು ನೀಡಬೇಕು ಎಂದ ಅವರು, ಜಿಲ್ಲೆಯ 155 ಗ್ರಾಮ ಪಂಚಾಯತಿಯ ಕೇಂದ್ರ ಸ್ಥಾನಗಳಲ್ಲಿ ನೆಟ್‌ವರ್ಕ ಸೌಲಭ್ಯ ಇರುವ ಹಾಗೆ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದರು. ಗ್ರಾಮ ಪಂಚಾಯತ್‌ಗಳು ಯಾವುದೇ ಸೇವಾ ಶುಲ್ಕಗಳು ಇಲ್ಲದೇ ಡಿಜಿಟಲ್ ಹಣ ಪಾವತಿಗೆ ಹಾಗೂ ಡಿಜಿಟಲ್ ಪಾವತಿಗೆ ಅನುಕೂಲವಾಗುವಂತೆ ಡಿಜಿಟಲ್ ಉಪಕರಣಗಳನ್ನು ಉಚಿತವಾಗಿ ಒದಗಿಸಿದ ಕೆನರಾ ಬ್ಯಾಂಕ್‌ಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ದೇವಾಡಿಗ, ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೆಜರ್ ಶ್ರೀರಾಮ ನಾಯ್ಕ, ರೀಜಿನಲ್ ಮ್ಯಾನೆಜರ್ ಲೀನಾ ಪಿಂಟೋ, ಅಸಿಸ್ಟಂಟ್ ಜನರಲ್ ಮ್ಯಾನೆಜರ್ ಸಂಜೀವ್, ಲೀಡ್ ಬ್ಯಾಂಕ್ ಮ್ಯಾನೆಜರ್ ಪಿ.ಎಂ.ಪಿಂಜಾರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೀತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಕಲ್ಯಾಣಪುರ ಗ್ರಾಮ ಪಂಚಾಯತಿಯ ಕಚೇರಿ, ಇಲ್ಲಿನ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ, ಸಂಜೀವಿನಿ ಸಂಘದ ಕಚೇರಿಗೆ ಹಾಗೂ ಅಗಸನಕೆರೆ ಅಭಿವೃದ್ಧಿಪಡಿಸುವ ಕುರಿತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಪರಿಶೀಲಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.