Home ಸುದ್ಧಿಗಳು ಪ್ರಾದೇಶಿಕ ಆಟಿ ಪಂಚಭೂತಗಳ ಆರಾಧನೆ: ಡಾ. ದಿವಾಕರ ಕೊಕ್ಕಡ

ಆಟಿ ಪಂಚಭೂತಗಳ ಆರಾಧನೆ: ಡಾ. ದಿವಾಕರ ಕೊಕ್ಕಡ

391
0

ಮಂಗಳೂರು: ತುಳುನಾಡಿನ ಆರಾಧನಾ ಸಂಸ್ಕೃತಿಯಲ್ಲಿ 12 ತಿಂಗಳ ಸೌರಮಾನ ಪರಿಕಲ್ಪನೆಯಲ್ಲಿ ಆಟಿಯೂ ಒಂದು ಪಂಚಭೂತಗಳ ಆರಾಧನೆಯ ಜೊತೆಗೆ ಆಟಿ ಅಮವಾಸ್ಯೆಯ ತೀರ್ಥಸ್ನಾನ ದೇಹದ ರೋಗರುಜಿನಗಳನ್ನು ನಾಶಮಾಡುವ ಔಷಧೀಯ ಜಲವಾಗಿ ತುಳುನಾಡಿನ ಜನರಲ್ಲಿ ಆರಾಧನಾ ಭಾವವನ್ನು ಹೊಂದಿದೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ದಿವಾಕರ ಕೊಕ್ಕಡ ಹೇಳಿದರು.

ಅವರು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ- ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ, ತುಳು ವಿಭಾಗದ ವತಿಯಿಂದ ನಡೆದ “ಆಟಿದ ನೆಂಪು” “ತುಳುನಾಡಿನ ಪಾರಂಪರಿಕ ವಸ್ತು ಹಾಗೂ ತಿನಿಸುಗಳ ಪ್ರದರ್ಶನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಟಿ ಹಿಂದಿನ ಕಾಲದಲ್ಲಿ ತುಳುನಾಡಿನ ಜನರಿಗೆ ಕಷ್ಟದ ತಿಂಗಳು. ಮಳೆಗಾಲದ ಅವಧಿಯಾಗಿದ್ದರಿಂದ ಜನರು ಹೊರಹೋಗಲು ಕಷ್ಟವಾಗಿ ಆಹಾರ ಹಾಗೂ ದುಡಿಮೆಗೆ ಕಷ್ಟಕರವಾದ ಸಮಯವಾಗಿತ್ತು. ಈ ತಿಂಗಳು ಜನರು ವಿರಾಮವಾಗಿದ್ದು, ಮನೋರಂಜನೆಗಾಗಿ ಚೆನ್ನೆಮಣೆಯಂತಹ ಆಟಗಳನ್ನು ಆಡುತ್ತಿದ್ದರು. ಆಟಿ ಅಮವಾಸ್ಯೆಯ ದಿನ ಕುಡಿಯುವ ಹಾಲೆ ಮರದ ಕಷಾಯ ಸರ್ವರೋಗ ಪರಿಹಾರವಾಗಿತ್ತು ಎಂದರು.

ತುಳು ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್, ನೇಜಿ ನೆಡುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇಲ್ಲಿನ ಪ್ರಾಂಶುಪಾಲರಾದ ಡಾ. ಪ್ರಕಾಶಚಂದ್ರ ಬಿ ಆಗಮಿಸಿದ್ದರು. ಅವರಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ., ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜು ಮುಖ್ಯ ಶೈಕ್ಷಣಿಕ ಸಲಹೆಗಾರರಾದ ಡಾ. ವಸಂತಿ ಪಿ., ಮತ್ತು ಡಾ. ನಾಗಪ್ಪ ಗೌಡ ಕೆ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಧಾಕರನ್ ಟಿ., ತುಳುಚಿತ್ರ ನಟಿ ಗಾನ ಭಟ್ ಹಾಗೂ ಅಬತರ – ಚಲನಚಿತ್ರ ತಂಡ, ತುಳು ವಿಭಾಗದ ಸಂಯೋಜಕರಾದ ಡಾ. ಜ್ಯೋತಿಪ್ರಿಯಾ, ಡಾ. ವಿನೋದ ಉಪಸ್ಥಿತರಿದ್ದರು.

ತುಳುನಾಡಿನ ಸಂಸ್ಕೃತಿಯ ಸೂಚಕವಾಗಿ ಆಟಿ ಕಳೆಂಜ ನೃತ್ಯ ಹಾಗೂ ತುಳುನಾಡಿನ ತಿಂಡಿ ತಿನಿಸುಗಳು ಮತ್ತು ಪಾರಂಪರಿಕ ವಸ್ತು ಪ್ರದರ್ಶನವನ್ನು ನಡೆಸಲಾಗಿತ್ತು. ಅಭಿಷೇಕ್ ಸ್ವಾಗತಿಸಿ, ವೈಷ್ಣವಿ ವಂದಿಸಿದರು. ಸಾಕ್ಷಿ ಹಾಗೂ ಅಶ್ವಿನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.