ಉಳ್ಳಾಲ, ಆ.25: ಉಳ್ಳಾಲ ತಾಲೂಕು ಪಜೀರು ಗ್ರಾಮದ ಸಂಬಾರತೋಟದ ನೂರಾನಿಯ ಜುಮಾ ಮಸೀದಿ ಹಾಗೂ ಸ್ವಲಾಹುದ್ದೀನ್ ಹೈಯರ್ ಸೆಕೆಂಡರಿ ಮದ್ರಸ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ಮಸೀದಿ ಮುದರ್ರಿಸ್ ಅಬ್ದುರ್ರಝ್ಝಾಕ್ ಅಹ್ಸನಿ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಿ, ದೇಶದ ಏಕತೆ, ಸೌಹಾರ್ದತೆ, ಸಹಬಾಳ್ವೆ ಹಾಗೂ ಪರಸ್ಪರ ಗೌರವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಭವಿಷ್ಯದ ಪೀಳಿಗೆಯಲ್ಲಿ ದೇಶಪ್ರೇಮ, ರಾಷ್ಟ್ರನಿಷ್ಠೆ ಹಾಗೂ ಜವಾಬ್ದಾರಿಯುತ ನಾಗರಿಕ ಪ್ರಜ್ಞೆಯನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಮದ್ರಸ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ದರ್ಸ್ ವಿದ್ಯಾರ್ಥಿಗಳಾದ ರಿಳ್ಪಾನ್, ನೌಫಲ್ ಹಾಗೂ ಶಾಕಿರ್ ಅವರು ಸಂದರ್ಭೋಚಿತವಾಗಿ ಸ್ವಾತಂತ್ರ್ಯೋತ್ಸವ ಹಾಗೂ ದೇಶಪ್ರೇಮದ ಮಹತ್ವವನ್ನು ಕುರಿತು ಮಾತನಾಡಿದರು.
ಹಾಫಿಳ್ ಶಿಹಾಬುದ್ದೀನ್ ಅಝ್ಹರಿ, ಸ್ವಾಲಿಹ್ ಅಹ್ಸನಿ ಅಲ್ ಕಾಮಿಲಿ, ಸಿನಾನ್ ಸಅದಿ, ಇಕ್ಬಾಲ್ ಜೌಹರಿ ಹಾಗೂ ಮುಸ್ತಫಾ ಹಮ್ದಾನಿ ಸೇರಿದಂತೆ ಮದ್ರಸ ಹಾಗೂ ಮಸೀದಿಯ ಪದಾಧಿಕಾರಿಗಳು ಮತ್ತು ಜಮಾಅತ್ ಸದಸ್ಯರು ಉಪಸ್ಥಿತರಿದ್ದರು. ಮದ್ರಸದ ಸದರ್ ಉಸ್ತಾದರಾದ ಜಿ.ಎಚ್. ಅಬೂಬಕ್ಕರ್ ಸಖಾಫಿ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.




By
ForthFocus™