ಮಂಗಳೂರು, ಮಾ.19: ಸಮಾಜಶಾಸ್ತ್ರ ಸಿದ್ಧಾಂತಗಳು ಅನ್ವಯಿಕವಾಗಿ ಬಳಕೆಯಾಗಬೇಕು ಮತ್ತು ಅವುಗಳು ಸಾಮಾಜಿಕ ಅಭಿವೃದ್ಧಿಗೆ ಅಡಿಪಾಯವಾಗಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ.ಗಿರಿಧರ ರಾವ್ ಎಂ.ಎಸ್ ಹೇಳಿದರು. ಅವರು ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಹಾಗೂ ಮಂಗಳೂರು ಸಮಾಜಶಾಸ್ತ್ರ ಸಂಘದ ಸಹಯೋಗದಲ್ಲಿ ನಡೆದ ಡಾ. ಟಿ.ಕೆ.ವಿ. ಭಟ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ “ಲಿಂಕಿಂಗ್ ಥಿಯರಿ ಟು ಪ್ರಾಕ್ಟೀಸ್” ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು. ರಾಜಕೀಯ ನೀತಿ ರಚನೆ, ಮಹಿಳಾ ಸಬಲೀಕರಣ, ಸಮುದಾಯ ಸಬಲೀಕರಣ, ಸಮುದಾಯ ಸಹಭಾಗಿತ್ವ ಮತ್ತು ಆರೋಗ್ಯ ಅಭಿವೃದ್ಧಿಯಲ್ಲಿ ಸಮಾಜಶಾಸ್ತ್ರ ಸಿದ್ಧಾಂತಗಳ ಅನ್ವಯಿಕತೆಯ ಬಗ್ಗೆ ಅವರು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಶ್ರಾಂತ ಪ್ರಾಧ್ಯಾಪಕ ಡಾ.ರಿಚರ್ಡ್ ಪಾಯಸ್ ಅವರು ಡಾ.ಟಿ.ಕೆ.ವಿ. ಭಟ್ ಅವರನ್ನು ಪರಿಚಯಿಸಿ ಸಮಾಜಶಾಸ್ತ್ರಕ್ಕೆ ಅವರ ಕೊಡುಗೆಗಳನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ., ಮಂಗಳೂರು ಸಮಾಜಶಾಸ್ತ್ರ ಸಂಘದ ಅರ್ಧವಾರ್ಷಿಕ ನಿಯತಕಾಲಿಕೆ ಸಮಾಜ ಶೋಧನಾವನ್ನು ಬಿಡುಗಡೆಗೊಳಿಸಿದರು. ಮಂಗಳೂರು ವಿ.ವಿ.ಯ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ವಿನಯ ರಜತ್ ಸಮಾಜ ಶೋಧನಾ ಪತ್ರಿಕೆಯನ್ನು ಪರಿಚಯಿಸಿದರು. ಡಾ. ದುಗ್ಗಪ್ಪ ಕಜೆಕಾರ್ ಸ್ವಾಗತಿಸಿ, ಸಮಾಜಶಾಸ್ತ್ರ ಸಂಘದ ಕಾರ್ಯದರ್ಶಿ ಡಾ. ರಾಜೇಂದ್ರ ಕೆ. ವಂದಿಸಿದರು. ಅಂತಿಮ ಬಿ.ಎ. ವಿದ್ಯಾರ್ಥಿ ಅಕ್ಷರ ಪ್ರಾರ್ಥಿಸಿ, ಪೂರ್ಣಪ್ರಜ್ಞಾ ಕಾಲೇಜಿನ ಅಧ್ಯಾಪಕ ಡಾ. ರಾಘವೇಂದ್ರ ನಿರೂಪಿಸಿದರು.




By
ForthFocus™