ಮಂಗಳೂರು: ಮಂಗಳೂರು ನಗರದ ಸಿ.ಟಿ.ಸೆಂಟರ್ ಬಳಿ ಪೆನ್ನುಗಳ ಮಾರಾಟದ ನೆಪದಲ್ಲಿ ಮಕ್ಕಳು ಭಿಕ್ಷಾಟನೆ ನಡೆಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರಿಂದ ಚೈಲ್ಡ್ ಲೈನ್ -1098 ಕ್ಕೆ ಬಂದಿರುವ ಹಿನ್ನಲೆಯಲ್ಲಿ ಚೈಲ್ಡ್ ಲೈನ್ ದ.ಕ.ಜಿಲ್ಲೆಯ ತಂಡವು ಬಂದರು ಪೋಲೀಸ್ ಸಿಬ್ಬಂದಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಭಿಕ್ಷಾಟನೆ ನಡೆಸುತ್ತಿದ್ದ ಹಾವೇರಿ ಮೂಲದ 9 ವರ್ಷ ಪ್ರಾಯದ ಬಾಲಕನನ್ನು ಭಿಕ್ಷಾಟನೆಯಿಂದ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಪುನರ್ವಸತಿಯನ್ನು ಕಲ್ಪಿಸಿದೆ.
ಸ್ಮಾರ್ಟ್ ಸಿಟಿಯ ಹಂತದಲ್ಲಿರುವ ಮಂಗಳೂರು ನಗರದಲ್ಲಿ ಇತ್ತೀಚೆಗೆ ಭಿಕ್ಷಾಟನೆಯು ದಂಧೆಯಾಗಿ ಪರಿಣಮಿಸಿದೆ. ನಗರದ ಪ್ರಮುಖ ಸಿಗ್ನಲ್ ಗಳಲ್ಲಿ ಯಾವ ಭಯವಿಲ್ಲದೇ ರಾಜಾರೋಷವಾಗಿ ನಿರಾಶ್ರಿತ ಕುಟುಂಬಗಳನ್ನು ಯಾರದ್ದೋ ಮಕ್ಕಳನ್ನು ಭಿಕ್ಷಾಟನೆ ದಂಧೆಯಲ್ಲಿ ಬಳಸಿಕೊಂಡು ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವುದು ಮೋಲ್ನೋಟಕ್ಕೆ ಕಂಡುಬರುತ್ತಿದೆ.
ಪ್ರತೀ ಸಲವು ಭಿಕ್ಷಾಟನೆ ನಿರತ ಮಕ್ಕಳಿಗೆ ಭಿಕ್ಷಾಟನೆ ನಡೆಸದಂತೆ ಅರಿವು ನೀಡಿದರೂ ಕೂಡ ಯಾವುದೇ ಬದಲಾವಣೆ ಕಾಣಿಸುತ್ತಿಲ್ಲ. ಇನ್ನು ಮುಂದೆಗೆ ಇಂತಹ ಮಕ್ಕಳನ್ನು ನೇರವಾಗಿ ರಕ್ಷಣೆ ಮಾಡಿ ಪುನರ್ವಸತಿಯನ್ನು ಕಲ್ಪಿಸುವ ಯೊಜನೆಯನ್ನು ಚೈಲ್ಡ್ ಲೈನ್ ದ.ಕ.ಜಿಲ್ಲೆಯು ಹಮ್ಮಿಕೊಂಡಿದೆ.
ನಗರದ ಯಾವುದೇ ಮೂಲೆಯಲ್ಲಿ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿಕೊಂಡಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಚೈಲ್ಡ್ ಲೈನ್ 1098 ಕ್ಕೆ ಕರೆ ಮಾಡಲು ತಿಳಿಸಲಾಗಿದೆ. ಚೈಲ್ಡ್ ಲೈನ್ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ಸಿಬ್ಬಂದಿಗಳಾದ ಕವನ್ ಕಬಕ, ಸ್ವಯಂ ಸೇವಕರಾದ ವಿಜಯಲಕ್ಷ್ಮೀ ಶೆಟ್ಟಿ, ದಿವ್ಯಾ ಕುರಿಯ ಹಾಗೂ ಬಂದರು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಜೊತೆಗಿದ್ದರು.