Home ಸುದ್ಧಿಗಳು ಪ್ರಾದೇಶಿಕ ಸೋಮೇಶ್ವರ: ಶ್ರೀ ಸೋಮನಾಥ ದೇವಾಲಯದ ಶಾಸನದ ಮರು ಪರಿಶೀಲನೆ

ಸೋಮೇಶ್ವರ: ಶ್ರೀ ಸೋಮನಾಥ ದೇವಾಲಯದ ಶಾಸನದ ಮರು ಪರಿಶೀಲನೆ

409
0

ಉಡುಪಿ, ಅ.23: ಮಂಗಳೂರಿನ‌ ಸೋಮೇಶ್ವರದ ಶ್ರೀ ಸೋಮನಾಥೇಶ್ವರ ದೇವಾಲಯದ ಆವರಣದಲ್ಲಿರುವ ಸ್ಮಾರಕ ಶಾಸನವನ್ನು ಭಾರತೀಯ ನಾಣ್ಯಶಾಸ್ತ್ರಜ್ಞ ಮಂದರ್ಕೆ ನಿತ್ಯಾನಂದ ಪೈ, ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮತ್ತು ಇಲ್ಲಿನ ತೃತೀಯ ಬಿ.ಎ ವಿದ್ಯಾರ್ಥಿಗಳಾದ ದಿಶಾಂತ್ ದೇವಾಡಿಗ ಮತ್ತು ವಿಶಾಲ್ ರೈ, ಕೆ. ಅವರು ಮರುಪರಿಶೀಲನೆಗೆ ಒಳಪಡಿಸಿರುತ್ತಾರೆ.
ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 4.5 ಅಡಿ ಎತ್ತರ ಮತ್ತು 1.5 ಅಡಿ ಅಗಲವಿದ್ದು, ಇದರಲ್ಲಿ 10-11 ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯ 12 ಸಾಲುಗಳಿದ್ದು ಉಳಿದ ಸಾಲುಗಳು ಸಂಪೂರ್ಣವಾಗಿ ತೃಟಿತಗೊಂಡಿವೆ. ಈ ಸ್ಮಾರಕ ಶಾಸನದಲ್ಲಿ ಎರಡು ಚಿತ್ರ ಪಟ್ಟಿಕೆಗಳಿದ್ದು, ಈ ಚಿತ್ರ ಪಟ್ಟಿಕೆಯನ್ನು ಪ್ರತ್ಯೇಕಿಸುವಂತೆ ಶಾಸನದ ಮೊದಲ ಸಾಲನ್ನು ಕೊರೆಯಲಾಗಿದೆ.

ಶಾಸನ ಪಠ್ಯ: 1. ಸಸ್ವಸ್ತಿ ‌ಸಮಸ್ತ ಭುವನ ವಿಖ್ಯಾತ, 2. ಸೋಮ‌ ಕುಲತಿಲಕ ಪಾಣ್ಡ್ಯ, 3. ಮಹಾರಾಜಾಧಿರಾಜ‌‌ ಪ, 4. ರಮೇಸ್ವರ ಪರಮ ಭಟ್ಟಾ, 5. ರಕರಪ್ಪ ಶ್ರೀಮತ್ಕುಲಸೆ, 6. ಕರಾಳ್ವರನು ನಡಪಿದ ಕಿಳ್ಲ, 7. ಸಿರಿಡೆ‌ ಗೆಯ್ದ ಧರ್ಮ್ಮ ಮೂ, 8. ವತ್ತೆರಡು ಅಡಗಳದ, 9. ಕೇಸವನ ಕಯ್ಯೊಳಯ್ನಱು, 10. ಮೂಡಿ ಬಿಳಗಿಗೆ, 11. ಅಡಗಳದ ತೆಮ, 12. ರಮಗೆ,13. ****14. ***

ಈ ಶಾಸನವು ಸಸ್ವಸ್ತಿ ಸಮಸ್ತ ಭುವನ ವಿಖ್ಯಾತ ಎಂದು ಆರಂಭವಾಗಿ ನಂತರದಲ್ಲಿ ಕುಲಶೇಖರ ಆಳ್ವರಸನು ನಡೆಸಿದ ಕಿಳ್ಲ ಸಿರಿಡೆ ಗೆಯ್ದ ಧರ್ಮ್ಮ ಎಂದು ಉಲ್ಲೇಖಿಸುತ್ತದೆ. ಶಾಸನದಲ್ಲಿ ಅಡಗಳದ ಕೇಸವನ ಕಯ್ಯೊಳು 500 ಮೂಡಿ ಎಂದಿದ್ದು ಶಾಸನ ಉಲ್ಲೇಖಿತ ಅಡಗಳ ಎಂಬುದು ಪ್ರಸ್ತುತ ಹತ್ತಿರದ ಅಡ್ಕ (ಅಡಕ) ಸ್ಥಳದ ಪ್ರಾಚೀ‌‌ನ ಹೆಸರಾಗಿರಬಹುದು. ಶಾಸನದ ಕೊನೆಯಲ್ಲಿ ಅಡಗಳದ ತೆಮರಮಗೆ ಎಂದಿದ್ದು ಮುಂದಿನ ಸಾಲುಗಳು ಗೋಚರಿಸುವುದಿಲ್ಲ. ಶಾಸನದ ಸಾರಾಂಶವನ್ನು ಗಮನಿಸಿದಾಗ ಇದೊಂದು ದಾನ ಶಾಸನವೆಂದು ತಿಳಿದು ಬರುತ್ತದೆ.

ಈ ಮೊದಲು ಅಧ್ಯಯನ ನಡೆಸಿದ ವಿದ್ವಾಂಸರು ಈ ಶಾಸನವನ್ನು ಆಳುಪ ದೊರೆ ಒಂದನೆ ಕುಲಶೇಖರನ ಮರಣ ಶಾಸನವೆಂದು ಹೇಳಿರುತ್ತಾರೆ. ಶಾಸನದ ಮೊದಲ ಸಾಲಿನಲ್ಲಿರುವ ಸಮಸ್ತ ಭುವನ ವಿಖ್ಯಾತ ಎಂದಿರುವುದನ್ನು ಸೋಮಪ್ರಭು ವಧಿಷ್ಠಿತ ಎಂದು ತಪ್ಪಾಗಿ ಓದಿದ್ದು, ಶಾಸನ ಉಲ್ಲೇಖಿತ ಕಿಳ್ಲೆ ಸಿರಿಡೆ ಗೆಯ್ದ ಎಂಬುದನ್ನು ಸಿರಿದೇವಯ ದಲ್ಯ ಎಂದು ಉಲ್ಲೇಖಿಸಿ ತುಳುನಾಡಿನ ಕಾರ್ಣಿಕದ ಸ್ತ್ರೀ ಸಿರಿಯ ಚರಿತ್ರೆಗೆ ಹೋಲಿಕೆಯನ್ನು ಮಾಡಿರುತ್ತಾರೆ. ಮಾತ್ರವಲ್ಲದೇ ಶ್ರೀಮತ್ಕುಲಸೇಕರಾಳ್ವನು ನಡಪಿದ ಎಂಬುವುದನ್ನು ನಳುಪಿದ ಎಂದು ಅರ್ಥೈಸಿ ಈತನು ಮರಣ ಹೊಂದಿದ್ದನೆಂದು ಹೇಳಿರುತ್ತಾರೆ.

ಆದರೆ ಶಾಸನದ ಪಟ್ಟಿಕೆಗಳಲ್ಲಿ ಕಂಡುಬರುವ ಚಿತ್ರಣವು ವೀರನು ಮರಣ ಹೊಂದಿದ ಸಂದರ್ಭದಲ್ಲಿ ವೀರಗಲ್ಲಿನಲ್ಲಿ ಕಂಡುಬರುವಂತಹ ಕೆತ್ತನೆಯಾಗಿದ್ದರೂ ಪ್ರಸ್ತುತ ಈ ಶಾಸನದಲ್ಲಿ‌ ಎಲ್ಲೂ ಸಹ ಕುಲಶೇಖರನ‌ ಮರಣದ‌ ವಿಚಾರವು ಕಂಡು ಬರುವುದಿಲ್ಲ. ಈ ಮೊದಲೇ ತಿಳಿಸಿರುವಂತೆ ಶಾಸನದ ಕೆಳಭಾಗದಲ್ಲಿನ ಅಕ್ಷರಗಳು ಅಸ್ಪಷ್ಟವಾಗಿ ಗೋಚರಿಸುವುದರಿಂದ ಇಲ್ಲಿ ಮರಣದ ಉಲ್ಲೇಖ ಇದ್ದಿರಲೂಬಹುದು. ಹಾಗಾಗಿ ಶಾಸನದಲ್ಲಿರುವ ಶಿಲ್ಪಗಳ ಆಧಾರದಲ್ಲಿ ಈ ಶಾಸನವು ಆಳುಪ ದೊರೆ ಕುಲಶೇಖರನ ಅಥವಾ ಆತನ ಯಾವನಾನೊಬ್ಬ ವೀರನು ಮರಣ ಹೊಂದಿದ ನೆನಪಿಗಾಗಿ ಈ ಶಾಸನವನ್ನು ಹಾಕಿರಬಹುದೆಂದು ಸಹ ಹೇಳಬಹುದು. ಈ‌ ಕ್ಷೇತ್ರಕಾರ್ಯ ಶೋಧನೆಯಲ್ಲಿ ಕದ್ರಿ ಶ್ರೀ ಮಂಜುನಾಥ ದೇವಾಲಯದ‌ ಮುಖ್ಯ ಗುಮಾಸ್ತ ಅರುಣ್ ಕುಮಾರ್, ಶ್ರೀ‌ ಸೋಮನಾಥ ದೇವಾಲಯದ‌ ಆಡಳಿತ ‌ಮಂಡಳಿಯವರು ಹಾಗೂ ವಿಜಿತ ಅಮೀನ್ ಅವರು‌ ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.