ಮಂಗಳೂರು, ಮಾ. 30: ನಗರದ ಶ್ರೀ ಭುವನೇಂದ್ರ ಸಭಾಭವನದಲ್ಲಿ ಕೆನರಾ ಕಲ್ಚರಲ್ ಅಕಾಡೆಮಿ ವತಿಯಿಂದ ಆಯೋಜಿಸಲಾದ ಹತ್ತು ದಿನಗಳ ವಿಕಸನ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ. ಶ್ರೀಶಕುಮಾರ್ ದೀಪ ಬೆಳಗಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಎಂ. ರಂಗನಾಥ್ ಭಟ್, ಜೊತೆ ಕಾರ್ಯದರ್ಶಿಗಳಾದ ಕೆ.ಸುರೇಶ್ ಕಾಮತ್, ಆಡಳಿತ ಮಂಡಳಿಯ ಸದಸ್ಯರಾದ ನರೇಶ್ ಶೆಣೈ ,ಕೆನರಾ ಕಲ್ಚರಲ್ ಅಕಾಡೆಮಿಯ ಸಂಯೋಜಕರಾದ ಶೃತಕೀರ್ತಿ, ವಿಕಸನ ಬೇಸಿಗೆ ಶಿಬಿರದ ಸಂಯೋಜಕಿಯಾದ ಮಮತಾ, ಪಿ ಆರ್ ಓ ಉಜ್ವಲ್ ಮಲ್ಯ, ಕೆನರಾ ಶಾಲೆಗಳ ಮುಖ್ಯ ಶಿಕ್ಷಕಿಯರಾದ ಕವಿತಾ ಮೌರ್ಯಾ, ಲಲನಾ ಶೆಣೈ, ಸುರೇಖಾ ಎಮ್ ಹೆಚ್, ಶಿಕ್ಷಕ ಶಿಕ್ಷಕೇತರ ವೃಂದದವರು, ನೂರಕ್ಕೂ ಮೇಲ್ಪಟ್ಟು ಶಿಬಿರಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ಶಿಕ್ಷಕಿಯಾದ ತೃಪ್ತಿ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಹತ್ತು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ನಾಟಕ, ರಂಗಕಲೆ, ಅಜ್ಜಿ ಕಥೆಗಳು, ಕರಕುಶಲ ಚಿತ್ರಕಲೆ, ಆಭರಣ ತಯಾರಿಕೆ, ಜನಪದ ಗೀತೆ ಗಾಯನ ಹಾಗೂ ನೃತ್ಯ, ಮುಖವಾಡ ತಯಾರಿಕೆ, ಪುರಾಣ ಕಥೆ, ಭಗವದ್ಗೀತೆ, ಯೋಗ, ಕುಣಿತ ಭಜನೆ, ದಾಂಡಿಯಾ ನೃತ್ಯ ಮೊದಲಾದ ಹಲವಾರು ಸಕ್ರಿಯ ಚಟುವಟಿಕೆಗಳನ್ನು ಆಯ್ದುಕೊಳ್ಳಲಾಗಿದೆ.
ಅಷ್ಟೇ ಅಲ್ಲದೆ ಮಕ್ಕಳಿಗಾಗಿ ಸೈಬರ್ ಸೇಫ್ಟಿ, ಟ್ರಾಫಿಕ್ ರೂಲ್ಸ್, ವ್ಯಕ್ತಿತ್ವ ವಿಕಸನ ಮಾಹಿತಿ ಕಾರ್ಯಾಗಾರ ಮೊದಲಾದ ವಿಶಿಷ್ಟ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ವಿಹಾರಕ್ಕಾಗಿ ಪಿಲಿಕುಳ ಪ್ರಾಣಿ ಸಂಗ್ರಹಾಲಯ ಹಾಗೂ ಹೆರಿಟೇಜ್ ವಿಲೇಜ್, ಕೃಷಿ ಮತ್ತು ಹೈನುಗಾರಿಕೆಯ ಅನುಭವ ಪಡೆದುಕೊಳ್ಳುವ ನಿಟ್ಟಿನಲ್ಲಿ ಹೆಜಮಾಡಿಯ ಆಗ್ರೋ ಫಾರ್ಮ್ಸ್ ಮತ್ತು ಗೋಶಾಲೆಗೆ ಶಿಬಿರಾರ್ಥಿಗಳನ್ನು ಕರೆದೊಯ್ಯಲಾಗುವುದು ಮತ್ತು ಪರ್ವತಾರೋಹಣದಲ್ಲಿ ಆಸಕ್ತಿ ಹೊಂದಿರುವ ಶಿಬಿರಾರ್ಥಿಗಳನ್ನು ಬೆಳ್ತಂಗಡಿಯ ಖಾಜೂರು ಫಾರೆಸ್ಟ್ ಗೆ ಕರೆದೊಯ್ಯಲಾಗುವುದು ಎಂದು ಅಕಾಡೆಮಿ ವ್ಯಕ್ತಪಡಿಸಿದೆ.
ಶಿಬಿರಾರ್ಥಿಗಳ ಆಸಕ್ತಿಗೆ ಸರಿಹೊಂದುವಂತಹ ಚಟುವಟಿಕೆಯಿಂದಾಗಿ ಈ ಶಿಬಿರವು ಮಕ್ಕಳ ಮನೋವಿಕಸನದ ಅಭಿವೃದ್ಧಿಗೆ ಪೂರಕವಾಗಬಲ್ಲದು ಎಂದು ಅಭಿಪ್ರಾಯಪಡಲಾಗಿದೆ.