Home ಸುದ್ಧಿಗಳು ಪ್ರಾದೇಶಿಕ ವ್ಯಸನದಿಂದ ದೂರವಿದ್ದಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ: ಶಾಸಕ ರಘುಪತಿ ಭಟ್

ವ್ಯಸನದಿಂದ ದೂರವಿದ್ದಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ: ಶಾಸಕ ರಘುಪತಿ ಭಟ್

437
0

ಉಡುಪಿ: ಜನಸಾಮಾನ್ಯರು ವ್ಯಸನದಿಂದ ದೂರವಿದ್ದಾಗ ಮಾತ್ರ ಉತ್ತಮ ಆರೋಗ್ಯವನ್ನು ಹೊಂದುವುದರ ಜೊತೆಗೆ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಅವರು ಮಂಗಳವಾರ ನಗರದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಉಡುಪಿ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಐ.ಆರ್.ಪಿ.ಎ ಮತ್ತು ಸ್ವಯಂ- ಸೇವಾ ಸಂಸ್ಥೆ ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಜನರು ಹೆಚ್ಚಾಗಿ ದುಶ್ಟಟಕ್ಕೆ ಒಳಗಾಗುತ್ತಿದ್ದಾರೆ. ಅವರಿಗೆ ದುಶ್ಟಟದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಅವುಗಳಿಂದ ದೂರ ಉಳಿಯುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಜಿಲ್ಲೆಯಲ್ಲಿ 27 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೊರ ರಾಜ್ಯ ಸೇರಿದಂತೆ ದೇಶ-ವಿದೇಶಗಳಿಂದ ಬರುತ್ತಿದ್ದಾರೆ. ಇವರುಗಳಲ್ಲಿ ಕೆಲವರು ದುಶ್ಟಟವನ್ನು ಹೊಂದಿದ್ದಾರೆ. ಅವರು ಇತರರಿಗೂ ದುಶ್ಟಟಕ್ಕೆ ಮಾರು ಹೋಗುವಂತೆ ಮಾಡುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಡಿವಾಣ ಹಾಕುವುದು ಸೂಕ್ತ ಎಂದರು.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಜಿಲ್ಲೆಯಲ್ಲಿ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ, ಜಿಲ್ಲೆಯಲ್ಲಿ ಡ್ರಗ್ಸ್ನ ನಿಯಂತ್ರಣ ಮಾಡಬೇಕು ಎಂದು ಸೂಚನೆ ನೀಡಿದರು. ಅದರನ್ವಯ ಜಿಲ್ಲಾ ಪೋಲಿಸ್ ಇಲಾಖೆ ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಕೋರೊನಾದಂತಹ ಮಹಾಮಾರಿಯಿಂದ ದೂರವಿರಲು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯ, ಆದರೆ ದುಶ್ಚಟಗಳು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಅದರಿಂದ, ದೂರವಿರುವುದು ಒಳಿತು ಎಂದರು.

ದುಶ್ಚಟಗಳಿಂದ ದೂರವಿರಬೇಕೆಂದರೆ ಅರಿವು ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ಜಿಲ್ಲೆಯನ್ನು ನಶಾಮುಕ್ತವನ್ನಾಗಿಸಲು ಇಲಾಖೆಗಳು, ಸಂಘ-ಸಂಸ್ಥೆಗಳು ಸೇರಿದಂತೆ ಎಲ್ಲರೂ ಕೈಜೋಡಿಸಿ ಈ ಕಾರ್ಯಕ್ರವನ್ನು ಯಶಸ್ವಿಗೊಳಿಸೋಣ ಎಂದ ಅವರು ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಯೋಜನೆಯು ಈ ದಿಸೆಯಲ್ಲಿ ಉತ್ತಮ, ಕೆಲಸ ಮಾಡುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಜಿಲ್ಲೆಯ ಒಳ್ಳೆಯ ಕಾರ್ಯಗಳನ್ನು ಮಾಡುವ ಉದ್ಧೇಶಕ್ಕೆ ಉತ್ತಮ ಸ್ಥಾನ ಪಡೆಯುತ್ತಿದೆ. ನಶಾಮುಕ್ತ ಜಿಲ್ಲೆಯಾಗಿಸುವಲ್ಲಿ ಎಲ್ಲರ ಸಹಭಾಗಿತ್ವ ಬೇಕಿದೆ. ಜಿಲ್ಲಾಡಳಿತ ಇವುಗಳ ನಿಯಂತ್ರಣಕ್ಕೆ ಹೆಚ್ಚಿನ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತೀ ಅವಶ್ಯಕ. ಡ್ರಗ್ಸ್ ಬಳಕೆ, ಮಾರಾಟ, ಸಾಗಾಟಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ನೀಡಿದ್ದಲ್ಲಿ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದ ಅವರು ಪೋಷಕರುಗಳು ಸಹ ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ನಿಗಾ ವಹಿಸುವುದು ಅವಶ್ಯ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳ ಎಸ್ ಮಾತನಾಡಿ, ಸಮಾಜದಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಸನಿಗಳಾಗುತ್ತಿದ್ದಾರೆ, ಅವರು ತಮ್ಮ ಕಾರ್ಯಗಳಲ್ಲಿ ಸೋಲು ಮತ್ತು ವೈಫಲ್ಯದ ಸಂದರ್ಭಗಳಲ್ಲಿ ಇಂತಹ ದುಶ್ಚಟಕ್ಕೆ ಮಾರು ಹೋಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಪೋಷಕರು, ಶಿಕ್ಷಕರು, ಸ್ನೇಹಿತರು, ಅವರುಗಳಿಗೆ ಸ್ಪಂದಿಸಿ ಮಾರ್ಗದರ್ಶನ ನೀಡುವುದು ಸೂಕ್ತ ಎಂದರು.
10 ನೇ ತರಗತಿ ನಂತರ ವಿದ್ಯಾರ್ಥಿಗಳ ಡ್ರಗ್ಸ್ ಟೆಸ್ಟ್ ಮಾಡಿಸುವುದು ಅವಶ್ಯಕ ಎಂದ ಅವರು, ಮಾದಕ ದ್ರವ್ಯಗಳು ಸುಲಭವಾಗಿ ಸಿಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಹೆಚ್ಚುವರಿ ಪೋಲಿಸ್ ಅಧೀಕ್ಷಕ ಕುಮಾರ್ ಚಂದ್ರ ಮಾತನಾಡಿ, ಇತ್ತೀಚೆಗೆ ಜಿಲ್ಲೆಯಲ್ಲಿ 3 ಕೋಟಿ ಮೌಲ್ಯದ ಜಪ್ತಿಯಾದ ಮಾದಕ ದ್ರವ್ಯಗಳನ್ನು ನಾಶಪಡಿಸಲಾಗಿದೆ. ಇದರಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳಿಂದ ಜಪ್ತಿ ಪಡಿಸಿಕೊಂಡಿರುವುದಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಜಿಲ್ಲಾ ವಿಕಲ ಚೇತನರ ಸಬಲೀಕರಣ ಅಧಿಕಾರಿ ರತ್ನ ಮಾತನಾಡಿದರು.

ಬಾಳಿಗ ಆಸ್ಪತ್ರೆಯ ಮನೋವೈದ್ಯ ಡಾ. ಪಿ.ವಿ ಭಂಡಾರಿಯವರು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ. ನಾಗಭೂಷಣ್ ಉಡುಪ, ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಡಿ.ಎನ್.ಎ ಸಂಸ್ಥೆಯ ವ್ಯವಸ್ಥಾಪಕರು ರೂಪಲಕ್ಷ್ಮಿ ನಿರೂಪಿಸಿ, ಹಿರಿಯ ನಾಗರಿಕ ಸಹಾಯವಾಣಿಯ ಸಂಯೋಜಕ ಗಣೇಶ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.