ಉಡುಪಿ, ನ.28: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಮೊದಲ ಬಾರಿಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಮೂಲಕ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಲಕ್ಷ ಕಂಠ ಗೀತಾ ಗಾಯನ ಕಾರ್ಯಕ್ರಮ ಅವಿಸ್ಮರಣೀಯವನ್ನಾಗಿಸಿದ್ದಾರೆ.



ಶುಕ್ರವಾರ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಲ ಸಂರಕ್ಷಣೆ, ಗಿಡಮರಗಳನ್ನು ನೆಡುವುದು, ಓರ್ವ ಬಡವರ ಜೀವನ ಸುಧಾರಿಸುವ ಜವಾಬ್ದಾರಿ ತೆಗೆದುಕೊಳ್ಳುವುದು, ಸ್ವದೇಶಿ ವಸ್ತುಗಳಿಗೆ ಬೆಂಬಲ, ನೈಸರ್ಗಿಕ ಕೃಷಿ, ಆರೋಗ್ಯವಂತ ಜೀವನಶೈಲಿ, ಯೋಗ, ಪ್ರಾಚೀನ ಇತಿಹಾಸವನ್ನು ಸಂರಕ್ಷಿಸಿ ಇಡುವುದು, ದೇಶದ ಸಾಂಸ್ಕೃತಿಕ ಹಿರಿಮೆಗೆ ಸಂಬಂಧಿಸಿದ 25 ಸ್ಥಳಗಳಿಗೆ ಭೇಟಿ ನೀಡುವುದು ಎಂಬ 9 ಸಂಕಲ್ಪಗಳನ್ನು ಕೈಗೊಂಡು ಈಡೇರಿಸುವಂತೆ ಜನರಿಗೆ ಕರೆ ನೀಡಿದರು.

ಉಡುಪಿಯ ಭೇಟಿ ನನಗೆ ವಿಶೇಷ: ಡಾ. ವಿ.ಎಸ್. ಆಚಾರ್ಯ ಅವರನ್ನು ನೆನಪಿಸಿದ ಪ್ರಧಾನಿ, ಉತ್ತಮ ಆಡಳಿತ ಮಾದರಿಯನ್ನು ಉಡುಪಿ ನಗರಸಭೆ ದೇಶಕ್ಕೆ ಪರಿಚಯಿಸಿದೆ ಎಂದು ಹೇಳಿದರು. ೨೦೧೪ ರಲ್ಲಿ ಘೋಷಣೆಯಾದ ಸ್ವಚ್ಛ ಭಾರತ ಅಭಿಯಾನ ಉಡುಪಿಯಲ್ಲಿ 5 ದಶಕಗಳ ಹಿಂದೆಯೇ ಜಾರಿಯಲ್ಲಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಕೃಷ್ಣನ ಸಂದೇಶ ಪಾಲಿಸಿ: ಬಡವರ ಸೇವೆ ಮಾಡಿ ಎಂದು ಶ್ರೀ ಕೃಷ್ಣ ಬೋಧಿಸಿದ್ದಾನೆ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳಿಗೆ ಶ್ರೀ ಕೃಷ್ಣನ ಬೋಧನೆಗಳೇ ಕಾರಣ ಎಂದು ಹೇಳಿದರು.

ಬೃಹತ್ ರೋಡ್ ಶೋ: ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನೆಚ್ಚಿನ ಪ್ರಧಾನಿಯವರನ್ನು ನೋಡಲೆಂದೇ ಸುಡು ಬಿಸಿಲನ್ನು ಲೆಕ್ಕಿಸದೇ ನಿಂತು ಪ್ರಧಾನಿ ಕೈಬೀಸಿದಾಗ ಹೂಮಳೆಗೈದರು. ಸರಿಯಾಗಿ 11.10ಕ್ಕೆ ಬನ್ನಂಜೆ ನಾರಾಯಣಗುರು ವೃತ್ತದಿಂದ ಆರಂಭವಾದ ರೋಡ್ ಶೋ ಕಲ್ಸಂಕದವರೆಗೆ ಇತ್ತು.

ಸಮಯ ಪ್ರಜ್ಞೆ: ದೂರದ ದೆಹಲಿಯಿಂದ ಬರುವಾಗ ನಿಗದಿತ ಸಮಯದಲ್ಲಿ ವ್ರತ್ಯಾಸ ಆಗುವುದು ಸಾಮಾನ್ಯ. ಆದರೆ, 11 ಗಂಟೆಗೆ ಪ್ರಧಾನಿ ಉಡುಪಿಗೆ ಆಗಮಿಸಲಿದ್ದಾರೆ ಎಂದು ನಿಗದಿಯಾಗಿತ್ತು. 3 ನಿಮಿಷ ಮುಂಚಿತವಾಗಿಯೇ ಹೆಲಿಕಾಪ್ಟರ್ ಆದಿಉಡುಪಿ ಹೆಲಿಪ್ಯಾಡ್ ನಲ್ಲಿ ಬಂದಿಳಿಯಿತು.

ರಾಜಕೀಯ ನಾಯಕರು ನಿಗದಿತ ಸಮಯಕ್ಕಿಂದ 2-3 ನಿಮಿಷ ಅಲ್ಲ, 2-3 ತಾಸು ಜನರನ್ನು ಸುಡುಬಿಸಿಲಲ್ಲಿ ಕಾಯಿಸುವುದು, ಮಾಧ್ಯಮದವರನ್ನು ಕಾಯಿಸುವುದು ಸರ್ವೇ ಸಾಮಾನ್ಯವಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಈ ವಯಸ್ಸಿನಲ್ಲಿಯೂ ಸಮಯ ಪರಿಪಾಲನೆ ಮಾಡುತ್ತಿರುವ ಪ್ರಧಾನಿಯ ನಡೆ ಮಾದರಿಯಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಕಿರಿಯ ಶ್ರೀಪಾದರು, ರಾಜ್ಯಸಭಾ ಸದಸ್ಯ ಡಾ. ಡಿ. ವಿರೇಂದ್ರ ಹೆಗ್ಗಡೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದರಾದ ಕೋಟ ಶೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ಶಾಸಕ ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.




By
ForthFocus™