ಉಡುಪಿ: ಭಾರತೀಯ ಜೀವ ವಿಮಾ ನಿಗಮದ ವಿಭಾಗೀಯ ಕಛೇರಿಯಲ್ಲಿ ೬೫ನೇ ವಿಮಾ ಸಪ್ತಾಹದ ಉದ್ಘಾಟಾನಾ ಸಮಾರಂಭ ನಡೆಯಿತು. ಒಂದು ವಾರಗಳ ಕಾಲ ನಡೆಯುವ ವಿಶೇಷ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಮಾರುಕಟ್ಟೆ ಪ್ರಬಂಧಕ ಎನ್. ರಮೇಶ್ ಭಟ್ ರವರು 65ನೇ ವಿಮಾ ಸಪ್ತಾಹದ ಸಂದೇಶವನ್ನು ನೀಡಿದರು.
ಕೋವಿಡ್‌ನೊಂದಿಗೆ ಬದಲಾದ ಪರಿಸ್ಥಿತಿಯಲ್ಲಿ ನಿಗಮವು ಸಾಮಾಜಿಕ ಜವಾಬ್ಧಾರಿಯೊಂದಿಗೆ ಸಾಧಿಸಿದ ಮೈಲುಗಲ್ಲುಗಳನ್ನು ಬಗ್ಗೆ ಬೆಳಕನ್ನು ಚೆಲ್ಲಿದ ಅವರು, ಇದಕ್ಕೆ ಕಾರಣಕರ್ತರಾದ ಎಲ್ಲಾ ಪಾಲಿಸಿದಾರರ, ಸಿಬ್ಬಂದಿ ವರ್ಗದವರ ಹಾಗೂ ಪ್ರತಿನಿಧಿಗಳ ಕೊಡುಗೆಗಳನ್ನು ಸ್ಮರಿಸಿದರು.
ಧ್ವಜಾರೋಹಣ ಹಾಗೂ ನಿಗಮ ಗೀತೆಯೊಂದಿಗೆ ಆರಂಭಗೊಂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಬಿಂದು ರಾಬರ್ಟ್ ರವರು 2020-21ನೇ ಆರ್ಥಿಕ ವರ್ಷದಲ್ಲಿನ ನಿಗಮದ ಸಾಧನೆಗಳನ್ನು ಹಾಗೂ ಉಡುಪಿ ವಿಭಾಗದ ಸಾಧನೆಗಳನ್ನು ಸ್ಮರಿಸಿದರು.
ಸರಕಾರದ ಪಂಚ ವಾರ್ಷಿಕ ಯೋಜನೆಗಳನ್ನೊಳಗೊಂಡಂತೆ, ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ನಿಗಮ ತೊಡಗಿಸಿರುವ ಬೃಹತ್ ಮೊತ್ತಗಳ ಬಗ್ಗೆಯೂ ವಿವರಿಸಿದರು.
ಕ್ಲೈಮ್ ಸೆಟ್ಲ್ಮೆಂಟ್‌ನಲ್ಲಿ ಮಂಚೂಣಿಯಲ್ಲಿರುವ ನಿಗಮವು, ಕೋವಿಡ್ ಸಮಯದಲ್ಲಿಯೂ ತನ್ನ ಹಿರಿತನವನ್ನು ಉಳಿಸಿಕೊಂಡಿದೆ. ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಅಗ್ರಗಣ್ಯನೆಂದೆನಿಸಿಕೊಂಡಿರುವ ನಿಗಮವು, ಪಾಲಿಸಿದಾರರಿಗೆ ಹಾಗೂ ಪ್ರತಿನಿಧಿಗಳಿಗೆ ಅನುಕೂಲವಾಗಿರುವ ಆನಂದ್ ಆಪ್ ಅಭಿವೃದ್ಧಿಪಡಿಸಿ ಅಳವಡಿಸಿಕೊಂಡಿರುವುದು ಈ ವರ್ಷದ ಹೆಗ್ಗಳಿಕೆಗಳಲ್ಲೊಂದಾಗಿದೆ ಎಂದರು.
65ನೇ ವರ್ಷದ ವಿಮಾ ಸಪ್ತಾಹದ ಅಂಗವಾಗಿ ಉಡುಪಿ ವಿಭಾಗದ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ, ಜಿಲ್ಲಾಸ್ಪತ್ರೆಗೆ ವಾಟರ್‌ಹೀಟರ್ ಕೊಡುಗೆ, ನಗರಸಭೆಯ ಸ್ವಚ್ಛತಾ ಕಾರ್ಯಕರ್ತರಿಗೆ ಮಾಸ್ಕ್ ಹಾಗೂ ಕೈಗವಸುಗಳ ಕೊಡುಗೆ, ಆಯುಷ್ ಆಸ್ಪತ್ರೆಗೆ ಪೀಠೋಪಕರಣಗಳ ಕೊಡುಗೆಗಳೂ ಸೇರಿವೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿನಲ್ಲಿ 75 ವರ್ಷ ಮೇಲ್ಪಟ್ಟ ಪಾಲಿಸಿದಾರರಾದ ಶ್ರೀಶ ಆಚಾರ್ಯ ಹಾಗೂ ಕೇಶವ ಕಲ್ಕುರ ರವರನ್ನು ಸನ್ಮಾನಿಸಲಾಯಿತು. ವಿಕ್ರಯ ಪ್ರಬಂಧಕ ಕೆ. ಸದಾಶಿವ ಕಾರ್ಯಕ್ರಮ ನಿರೂಪಿಸಿದರು. ವಿಭಾಗೀಯ ಕಛೇರಿಯ ವಿಮಾ ಪರಿವಾರದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.