ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಕಾರ್ಪೊರೇಟ್ ಕಂಪನಿ, ಬ್ಯಾಂಕ್ ಗಳು, ವೈದ್ಯಕೀಯ ಸಂಘ, ಆಸ್ಪತ್ರೆಗಳು ಮತ್ತು ಮಾಧ್ಯಮ ಮಿತ್ರರಿಗಾಗಿ 3 ದಿನಗಳ ಕಾಲ ಸೌಹಾರ್ದಯುತವಾಗಿ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಸಿಸಿಎಲ್ 2021) ಆಯೋಜಿಸಿತ್ತು.
ಡಿಸೆಂಬರ್ 17 ರಂದು ಆರಂಭವಾದ ಕೂಟವು ಇಂದು ಮುಕ್ತಾಯಗೊಂಡಿತು. ಇಂದು ನಡೆದ ಸಮಾರೂಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೆ.ಕೆ. ಫಿಶ್ ನೆಟ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಬಾಳಿಗಾ ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಅವರು, ಇಂತಹ ಕ್ರೀಡಾಕೂಟಗಳು ಸಂಸ್ಥೆಗಳ ನಡುವೆ ಸ್ನೇಹದ ಸೇತುವೆಯಾಗಲಿದೆ. ಅತ್ಯುತ್ತಮವಾಗಿ ಆಯೋಜಿಸಿದ ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯ ಎಂದರು.
ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಗಳಾದ ಡಾ. ಪಿಎಲ್ಎನ್ ಜಿ ರಾವ್ ಗೌರವ ಅತಿಥಿ ಸ್ಥಾನದಲ್ಲಿ ಮಾತನಾಡುತ್ತಾ, ಇನ್ನಷ್ಟು ಬೇರೆ ಬೇರೆ ರೀತಿಯ ಕ್ರೀಡಾಕೂಟಗಳು ನಡೆಯಬೇಕು ಎಂದರು.
ಕೆಎಂಸಿ ಡೀನ್ ಡಾ. ಶರತ್ ಕೆ ರಾವ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಿಒಒ ಸಿ ಜಿ ಮುತ್ತಣ್ಣ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಉಪಸ್ಥಿತರಿದ್ದರು.
ಮೊತ್ತ ಮೊದಲ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಸಿಸಿಎಲ್ 2021) ನಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವಿಜೇತರಾದರೆ, ಮಾಹೆ ಮಣಿಪಾಲ ರನ್ನರ್ ಆಪ್ ಪ್ರಶಸ್ತಿ ಪಡೆಯಿತು.
ಅವಿನಾಶ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ವಿನಯ್ ಅವರು ಪಂದ್ಯಶ್ರೇಷ್ಠ , ವಿಘ್ನೇಶ್ ಉತ್ತಮ ದಾಂಡಿಗ ಮತ್ತು ವಿನಯ್ ಅವರು ಉತ್ತಮ ಎಸೆತಗಾರ ಪ್ರಶಸ್ತಿ ಪಡೆದರು.