ಉಡುಪಿ: ಜಿಲ್ಲೆಯಲ್ಲಿ 2021 ರ ಜನವರಿ 16 ರಿಂದ ಕೋವಿಡ್-19 ಲಸಿಕಾಕರಣ ಪ್ರಾರಂಭಿಸಲಾಗಿದ್ದು, ಆರೋಗ್ಯ ಕಾರ್ಯಕರ್ತರಿಗೆ, ಭಾರತ ಸರಕಾರದಿಂದ ಗುರುತಿಸಿದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು.
ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಮತ್ತು ರಾಜ್ಯ ಸರಕಾರದಿಂದ ಗುರುತಿಸಿದ ಮುಂಚೂಣಿ ಕಾರ್ಯಕರ್ತೆಯರಿಗೆ ಹಾಗೂ ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ಲಸಿಕೆ ನೀಡಲು ಪ್ರಾರಂಭಿಸಲಾಯಿತು.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು 9,99,000 ಗುರಿಯನ್ನು ಜಿಲ್ಲೆಗೆ ರಾಜ್ಯ ಸರ್ಕಾರದಿಂದ ನಿಗದಿಪಡಿಸಿದ್ದು, ಇದುವರೆಗೆ 1ನೇ ಡೋಸ್ ಲಸಿಕೆಯನ್ನು 9,24,639 (92.56%) ಜನರಿಗೆ ನೀಡಲಾಗಿದೆ ಹಾಗೂ ಇವರಲ್ಲಿ ಈಗಾಗಲೇ 6,11,569 (61.22%) ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ಸಹ ನೀಡಲಾಗಿದೆ.
ಕೋವಿಡ್ ಸಂಭಾವ್ಯ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. 18 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ಪಡೆಯದವರಿಗೆ ಕೋವಿಡ್ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿದ್ದು, ಎರಡನ್ನೂ ತಡೆಗಟ್ಟಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವುದು ಬಹಳ ಮುಖ್ಯವಾಗಿದೆ.
ಆದ್ದರಿಂದ ಕೋವಿಡ್ ಲಸಿಕೆ ಪಡೆಯದ 18 ವರ್ಷ ಮೇಲ್ಪಟ್ಟ ಎಲ್ಲರೂ ಮತ್ತು 2ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು (ಪ್ರಥಮ ಡೋಸ್ ಕೋವಿಶೀಲ್ಡ್ ಪಡೆದು 84 ದಿನ ದಾಟಿದವರು ಹಾಗೂ ಪ್ರಥಮ ಡೋಸ್ ಕೋವ್ಯಾಕ್ಸಿನ್ ಪಡೆದು 28 ದಿನ ದಾಟಿದವರು) ಕೂಡಲೇ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆದು ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು.
ಜಿಲ್ಲೆಯಲ್ಲಿ ನವೆಂಬರ್ 22 ರಿಂದ 30 ರ ವರೆಗೆ ಕೋವಿಡ್ ಲಸಿಕಾಕರಣದ ಬಗ್ಗೆ ಮನೆ ಮನೆ ಭೇಟಿ (ಹರ್ ಘರ್ ದಸ್ತಕ್) ಕಾರ್ಯಕ್ರಮ ಜರುಗುತ್ತಿದ್ದು, ಈ ಅಭಿಯಾನದಡಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಭೇಟಿ ಮಾಡಿ, ವೋಟರ್ ಲಿಸ್ಟ್ ಪ್ರಕಾರ ಸರ್ವೆ ನಡೆಸಿ ಮೊದಲನೇ ಡೋಸ್ ಪಡೆಯದ ಹಾಗೂ ಎರಡನೇ ಡೋಸ್‌ಗೆ ಬಾಕಿ ಇರುವ ಫಲಾನುಭವಿಗಳಿಗೆ ಲಸಿಕೆ ಪಡೆಯಲು ಮನವೊಲಿಸಿ ಲಸಿಕೆ ಪಡೆಯಲು ಪ್ರೇರೇಪಿಸಲಿರುವರು.
ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕಾರಣದಲ್ಲಿ ಶೇಕಡಾ 100 ರ ಗುರಿಯನ್ನು ಸಾಧಿಸಬೇಕಾಗಿದ್ದು, 18 ವರ್ಷ ಮೇಲ್ಪಟ್ಟವರಲ್ಲಿ ಇದುವರೆಗೂ ಕೋವಿಡ್ ಲಸಿಕೆ ಪಡೆಯದವರು ಲಸಿಕಾ ಕೇಂದ್ರಕ್ಕೆ ಬಂದು ಪ್ರಥಮ ಡೋಸ್ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಮತ್ತು ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 84 ದಿನಗಳು ಮೀರಿದವರು 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಬೇಕು.
ಕೋವ್ಯಾಕ್ಸಿನ್ ಪ್ರಥಮ ಡೋಸ್ ಪಡೆದು 28 ದಿನಗಳು ಮೀರಿದವರು 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ಲಸಿಕಾ ಕೇಂದ್ರಕ್ಕೆ ಬಂದು ಪಡೆದುಕೊಳ್ಳಬೇಕು. ಕೋವಿಡ್ ಲಸಿಕೆ ಪಡೆಯುವವರಿಗೆ ಯಾವುದೇ ಲಸಿಕಾ ಕೇಂದ್ರದಲ್ಲಿ ಕೋವಿಡ್-19 ಮಾದರಿ ಪರೀಕ್ಷೆ ಮಾಡಲಾಗುವುದಿಲ್ಲ.
ಈ ಮೂಲಕ ಜಿಲ್ಲೆಯಲ್ಲಿ ಶೇ. 100 ರ ಗುರಿಯನ್ನು ಸಾಧಿಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.