ಉಡುಪಿ: ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ವಿಟ್ಲ ಪಿಂಡಿ ಮಹೋತ್ಸವಕ್ಕೆ ಕೊರೊನಾ ಕರಿನೆರಳು ಇದ್ದರೂ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ಹಬ್ಬದ ಸಡಗರ ಎಂದಿನಂತಿದೆ. ಭಕ್ತರು ಮಾಸ್ಕ್ ಧರಿಸಿ ಕುಟುಂಬ ಸದಸ್ಯರ ಜೊತೆಗೆ ಪೊಡವಿಗೊಡೆಯನ ದರ್ಶನ ಪಡೆದರು. ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದು ಹೂವು, ಆಟಿಕೆ, ಇತರೆ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಿನ್ನೆಯಿಂದ ಕರಾವಳಿಯಲ್ಲಿ ಮುಂಗಾರು ಚುರುಕು ಪಡೆದಿದ್ದರಿಂದ ಸೋಮವಾರ ಭಕ್ತರ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಕುಸಿತ ಉಂಟಾಗಿತ್ತು. ಜನ್ಮಾಷ್ಠಮಿಗೆಂದೇ ಹೂವು, ತುಳಸಿ, ಕೊಳಲು, ಇತರೆ ವಸ್ತುಗಳನ್ನು ಮಾರಾಟ ಮಾಡಲು ದೂರದ ಊರುಗಳಿಂದ ಪ್ರತಿವರ್ಷದಂತೆ ಈ ಬಾರಿಯೂ ಸಣ್ಣಪುಟ್ಟ ವ್ಯಾಪಾರಿಗಳು ರಥಬೀದಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.
10 ವರ್ಷಗಳಿಂದ ಕುಂಭಾಶಿಯಿಂದ ತುಳಸಿ ಮಾರಾಟ ಮಾಡಲು ರಥಬೀದಿಗೆ ಬರ್ತಾ ಇದ್ದೇನೆ. ಕಳೆದ ಬಾರಿ ಕೊರೊನಾ ಹಾವಳಿಯಿಂದ ಇಲ್ಲಿಗೆ ಬರಲಿಲ್ಲ. ಈ ಬಾರಿ ಮಾರಾಟ ಮಾಡಲು ಆಗುತ್ತೊ ಇಲ್ವೊ ಎಂಬ ಗೊಂದಲದಿಂದ ಕಡಿಮೆ ಪ್ರಮಾಣದಲ್ಲಿ ತುಳಸಿ ತಂದಿದ್ದೇನೆ. ವ್ಯಾಪಾರಕ್ಕೆ ಯಾವುದೇ ತೊಂದರೆ ಆಗಲಿಲ್ಲ ಎಂದು ಕುಂಭಾಶಿಯಿಂದ ಬಂದಿರುವ ಮಹಿಳಾ ಮಾರಾಟಗಾರರು ಹೇಳಿದರು.
ಸಿನೆಮಾ ಹಾಡುಗಳನ್ನು ಅತ್ಯಾಕರ್ಷಕವಾಗಿ ತನ್ನ ಕೊಳಲಿನ ಮೂಲಕ ರಥಬೀದಿಯಲ್ಲಿ ಪ್ರತಿಧ್ವನಿಸುತ್ತಿದ್ದ ಓರ್ವ ಹಿರಿಯ ವ್ಯಾಪಾರಿಯೊಬ್ಬರನ್ನು ಮಾತನಾಡಿಸಿದಾಗ, ನಾನು ಹುಬ್ಬಳ್ಳಿಯಿಂದ ಮೊದಲ ಬಾರಿಗೆ ಇಲ್ಲಿಗೆ ವ್ಯಾಪಾರ ಮಾಡಲು ಬಂದಿದ್ದೇನೆ. ಜನಸಂಚಾರ ವಿರಳವಾಗಿದೆ. ವ್ಯಾಪಾರ ಮಂದಗತಿಯಲ್ಲಿ ಸಾಗುತ್ತಿದೆ ಎಂದು ತಮ್ಮ ಮನದಾಳವನ್ನು ವ್ಯಕ್ತಪಡಿಸಿದರು.
ನಾವು ತಿಪಟೂರಿನಿಂದ ಬಂದಿದ್ದೇವೆ. ಉಡುಪಿಯ ಮಳೆ ನಮ್ಮಲ್ಲಿ ಆತಂಕ ಮೂಡಿಸಿದೆ. ಊರಿಗೆ ಹೊರಡುವಾಗ ಎಲ್ಲಾ ಮಾರಾಟ ಆದರೆ ಬಂದಿದ್ದು ಸಾರ್ಥಕವಾಗುತ್ತದೆ. ಉಡುಪಿಯ ಕೃಷ್ಣ ನಮ್ಮ ಕೈಬಿಡಲ್ಲ ಎಂಬ ವಿಶ್ವಾಸವಿದೆ ಎಂದು ದೂರದ ತಿಪಟೂರಿನಿಂದ ಬಂದಿರುವ ಮಹಿಳಾ ವ್ಯಾಪಾರಿ ತನ್ನ ವ್ಯಾಪಾರದ ಕುರಿತು ಮಾತನಾಡಿದರು.
ಬಹುತೇಕ ಸಂಘ ಸಂಸ್ಥೆಗಳು ಈ ವರ್ಷವೂ ಆನ್ ಲೈನ್ ಮೂಲಕ ಮುದ್ದುಕೃಷ್ಣ ಸ್ಪರ್ಧೆ ಏರ್ಪಡಿಸಿದ್ದರೂ ಇಂದು ರಥಬೀದಿಯಲ್ಲಿ ಮುದ್ದುಕೃಷ್ಣರ ದರ್ಶನ ಅಲ್ಲಲ್ಲಿ ಆಗುತ್ತಿತ್ತು. ಕಳೆದ ವರ್ಷದಂತೆ ಈ ಬಾರಿಯೂ ಹುಲಿವೇಷಗಳ ಸೊಬಗು ಕಣ್ತುಂಬಿಕೊಳ್ಳಲು ಕೊರೊನಾ ಅಡ್ಡಗಾಲು ಇಟ್ಟಿದೆ.