ಡಾ. ವಿ.ಎಸ್. ಆಚಾರ್ಯರ ಜನ್ಮದಿನದ ಪ್ರಯುಕ್ತ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗಿನ ರಸ್ತೆಗೆ ಡಾ. ವಿ. ಎಸ್. ಆಚಾರ್ಯ ರಸ್ತೆ ಎಂದು ಮಂಗಳವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಘೋಷಣೆ ಮಾಡಿ ನಾಮಫಲಕ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, ಡಾ. ಆಚಾರ್ಯರ ಪಕ್ಷನಿಷ್ಠೆ, ಸಂಘಟಾನ ಚತುರತೆ ಮತ್ತು ಕರ್ತವ್ಯನಿಷ್ಠೆ ಸದಾ ಪ್ರೇರಣೆಯಾಗಿದೆ. ರಾಜಕೀಯದಲ್ಲಿ ಡಾ. ಆಚಾರ್ಯರಂತಹ ಮುತ್ಸದಿ ರಾಜಕಾರಣಿ ಬಹಳ ಅಪರೂಪ. ಅವರಲ್ಲಿದ್ದ ಗುಣಗಳನ್ನು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರು ಕೂಡ ಇಷ್ಟಪಡುತ್ತಿದ್ದರು ಎಂದರು. ಜಿಲ್ಲಾಧಿಕಾರಿ ಕಚೇರಿ ಎದುರಿನ ಡಾ. ವಿ.ಎಸ್. ಆಚಾರ್ಯರವರ ಪುತ್ಥಳಿಗೆ ಸಚಿವ ಜಗದೀಶ್ ಶೆಟ್ಟರ್ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ನಗರಸಭೆ ಪೌರಾಯುಕ್ತ ಉದಯಕುಮಾರ್, ಡಾ. ಆಚಾರ್ಯರ ಪುತ್ರರಾದ ಡಾ. ರವಿರಾಜ ಆಚಾರ್ಯ, ಡಾ. ಕಿರಣ್ ಆಚಾರ್ಯ ಮೊದಲಾವರು ಉಪಸ್ಥಿತರಿದ್ದರು.