ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರವನ್ನು ಶೇ.5% ಕ್ಕಿಂತ ಕಡಿಮೆಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು. ಅವರು ಸೋಮವಾರ ವೀಡಿಯೋ ಸಂವಾದದ ಮೂಲಕ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ದರವನ್ನು 5% ಗಿಂತ ಕಡಿಮೆಗೊಳಿಸಬೇಕು ಎಂಬ ಷರತ್ತಿನೊಂದಿಗೆ ಜಿಲ್ಲೆಯಲ್ಲಿ ಅನ್‌ಲಾಕ್ ಮಾಡಲು ಸರ್ಕಾರ ಆದೇಶಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು ಪಾಸಿಟಿವಿಟಿ ಪ್ರಮಾಣವನ್ನು ಕಡಿಮೆಗೊಳಿಸಬೇಕು, ಅನ್‌ಲಾಕ್ ಅವಧಿಯಲ್ಲಿ ಜನಜಂಗುಳಿ ಉಂಟಾಗದಂತೆ ಕಡ್ಡಾಯವಾಗಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆಯಾಗುವಂತೆ ನೋಡಿಕೊಳ್ಳಬೇಕು, ಈ ಬಗ್ಗೆ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯಿಂದ ಪರಿಶೀಲನೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಚಿವ ಬೊಮ್ಮಾಯಿ ಸೂಚಿಸಿದರು.
ಐಎಲ್‌ಐ ಮತ್ತು ಸಾರಿ ಪ್ರಕರಣಗಳನ್ನು ಬೇಗನೆ ಗುರುತಿಸಿ ಅಗತ್ಯ ಚಿಕಿತ್ಸೆ ನೀಡಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಗಳನ್ನು ನೆಡೆಸಿ ಸೋಂಕಿತರನ್ನು ಗುರುತಿಸಿ , ಅವರಿಗೆ ತಕ್ಷಣದಿಂದ ಚಿಕಿತ್ಸೆ ಆರಂಬಿಸಬೇಕು, ಮಾರ್ಗಸೂಚಿಯಲ್ಲಿ ತಿಳಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ , ಧಾರ್ಮಿಕ , ರಾಜಕೀಯ ಸೇರಿದಂತೆ ಯಾವುದೇ ಸಮಾರಂಭಗಳನ್ನು ನಡೆಸಲು ಅನುಮತಿ ನೀಡಬೇಡಿ , ಅನಧಿಕೃತವಾಗಿ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಇಂದು ಕೋವಿಡ್ ಲಸಿಕಾ ಮೇಳದ ಮೂಲಕ 30000 ಡೋಸ್ ಲಸಿಕೆ ವಿತರಿಸಲಾಗುತ್ತಿದ್ದು, ಜಿಲ್ಲೆಗೆ ಪ್ರತೀ ವಾರ ಸರಾಸರಿ 5000 ಡೋಸ್ ಮಾತ್ರ ಲಸಿಕೆ ಬರುತ್ತಿದ್ದು, ಈ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಕೋರಿದರು.
ಜಿಲ್ಲೆಗೆ ಪ್ರತಿ ವಾರ ನೀಡಲಾಗುವ ಕೋವಿಡ್ ಲಸಿಕೆ ಡೋಸ್ ನ್ನು 10000 ರಿಂದ 12000 ದ ವರೆಗೆ ಹೆಚ್ಚಳ ಮಾಡುವ ಕುರಿತಂತೆ ತಕ್ಷಣವೇ ಸೂಚನೆ ನೀಡಲಾಗುವುದು ಎಂದ ಸಚಿವ ಬೊಮ್ಮಾಯಿ ಜಿಲ್ಲೆಯ ಆಕ್ಸಿಜಿನ್ ಪ್ಲಾಂಟ್ ಗಳ ಕಾಮಗಾರಿಗಳ ಕುರಿತಂತೆ ವಿವರವಾಗಿ ಪರಿಶೀಲಿಸಿ, ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ, ಪ್ಲಾಂಟ್ ಗಳನ್ನು ಕಾರ್ಯರಂಭಗೊಳಿಸುವಂತೆ ಸೂಚಿಸಿದರು.
ಮಂಗಾರು ಮಳೆಯಿಂದ ಹಾನಿಗೊಳಗಾಗ ಮನೆಗಳ ಸಮೀಕ್ಷೆಯನ್ನು ತಕ್ಷಣದಲ್ಲಿ ಕೈಗೊಂಡು ಅಂದಾಜು ವರದಿ ನೀಡುವಂತೆ ಸೂಚಿಸಿದ ಸಚಿವರು, ಮನೆ ಹಾನಿ ಪ್ರದೇಶಗಳಲ್ಲಿ ಇಂಜಿನಿಯರ್‌ಗಳು ಮತ್ತು ಸಂಬಂಧಪಟ್ಟ ಪಿಡಿಓ ಗಳು ಖುದ್ದಾಗಿ ಹಾಜರಾಗಿ ವರದಿ ಸಿದ್ದಪಡಿಸಬೇಕು, ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಛಾಯಾಚಿತ್ರವನ್ನು ಪಡೆಯುವಂತೆ ಸೂಚಿಸಿದ ಅವರು, ವಿಳಂಬಕ್ಕೆ ಆಸ್ಪದ ನೀಡದಂತೆ ಅತ್ಯಂತ ಕನಿಷ್ಠ ಕಾಲಮಿತಿಯಿಳಗೆ ವರದಿಯನ್ನು ಪಡೆದು, ಹಾನಿಯ ಬಗ್ಗೆ ಸರ್ಕಾರಕ್ಕೆ ವರದಿ ಮಾಡುವಂತೆ ಸೂಚನೆ ನೀಡಿದರು.
ಮಂಗಳೂರಿನಲ್ಲಿ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ತಂಡಗಳಿದ್ದು, ತುರ್ತು ಸಂದರ್ಭದಲ್ಲಿ ಏಕಕಾಲದಲ್ಲಿ ಎರಡೂ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲು ತಂಡದ ಅರ್ಧ ಸದಸ್ಯರು ಮಾತ್ರ ದೊರೆಯಲಿದ್ದು, ಉಡುಪಿ ಜಿಲ್ಲೆಗೆ ಪೂರ್ಣ ಪ್ರಮಾಣದ ಒಂದು ತಂಡವನ್ನು ನೀಡುವಂತೆ ಜಿಲ್ಲಾಧಿಕಾರಿ ಕೋರಿದರು.
ಸಭೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್, ಡಿಹೆಚ್‌ಓ ಡಾ.ನಾಗಭೂಷಣ ಉಡುಪ ಮತ್ತಿತರರು ಉಪಸ್ಥಿತರಿದ್ದರು.