ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಕಾರ್ಪೊರೇಟ್ ಕಂಪನಿ, ಬ್ಯಾಂಕಗಳು, ವೈದ್ಯಕೀಯ ಸಂಘ, ಆಸ್ಪತ್ರೆಗಳು ಮತ್ತು ಮಾಧ್ಯಮ ಮಿತ್ರರಿಗಾಗಿ 3 ದಿನಗಳ ಕಾಲ ಸೌಹಾರ್ದಯುತವಾಗಿ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಸಿಸಿಎಲ್ 2021) ಆಯೋಜಿಸಿದೆ.
ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್ ಅವರು ಟ್ರೋಪಿ ಅನಾವರಣ ಮಾಡಿ ಮೊದಲ ಟಾಸ್ ಮಾಡುವುದರ ಮೂಲಕ ಕಸ್ತೂರ್ಬಾ ಆಸ್ಪತ್ರೆ ಸಿ ಸಿ ಎಲ್ 2021 ಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಿಂದ ಹೆಚ್ಚಿನವರಿಗೆ ಆಡಲು ಅವಕಾಶ ಸಿಗಲಿಲ್ಲ. ಈಗ ಇದಕ್ಕೆ ಒಂದು ಅವಕಾಶವನ್ನು ಕಸ್ತೂರ್ಬಾ ಆಸ್ಪತ್ರೆ ಮಾಡಿಕೊಟ್ಟಿದೆ. ಮಾಹೆ ಮಣಿಪಾಲವು ಯಾವಾಗಲೂ ಕ್ರೀಡೆ ಮತ್ತು ಚಟುವಟಿಕೆಗಳಿಗೆ ತುಂಬಾ ಬೆಂಬಲ ನೀಡುತ್ತದೆ.
ಕೆಲವೇ ಕೆಲವು ವಿಶ್ವವಿದ್ಯಾನಿಲಯಗಳು ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಗಾಗಿ ಭಾರತ ಸರಕಾರದಿಂದ ಗುರುತಿಸಲ್ಪಟ್ಟಿವೆ, ಅವುಗಳಲ್ಲಿ ಮಾಹೆ ಮಣಿಪಾಲವು ಸಹ ಒಂದಾಗಿದೆ ಎಂದರು.
ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್, ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿಗಳಾದ ಡಾ. ಪಿಎಲ್ಎನ್ ಜಿ ರಾವ್, ಕೆಎಂಸಿ ಡೀನ್ ಡಾ. ಶರತ್ ಕೆ ರಾವ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಿಒಒ ಸಿ ಜಿ ಮುತ್ತಣ್ಣ, ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ, ಕೆಎಂಸಿ ಮಂಗಳೂರಿನ ವೈದ್ಯಕೀಯ ಅಧೀಕ್ಷಕರಾದ ಡಾ. ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು.
ಕ್ರಿಕೆಟ್ ಟೂರ್ನಮೆಂಟ್ 17ನೇ ಡಿಸೆಂಬರ್ 2021ರಿಂದ 19ನೇ ಡಿಸೆಂಬರ್ 2021ರ ವರೆಗೆ ಮಣಿಪಾಲದ ಎಂಡ್ ಪಾಯಿಂಟ್ ಮೈದಾನದಲ್ಲಿ ನಡೆಯಲಿದೆ. ಸುಮಾರು 21 ತಂಡಗಳು ಭಾಗವಹಿಸುತ್ತಿವೆ.
ಡಿಸೆಂಬರ್ 19ರಂದು ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರಾದ ವಿ ಸುನಿಲ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.